Site icon Vistara News

Junior Veterinary Examiner 2022 | ಕಿರಿಯ ಪಶುವೈದ್ಯಕೀಯ ಪರೀಕ್ಷಕರ ನೇಮಕಕ್ಕೆ ಅಧಿಸೂಚನೆ ಪ್ರಕಟ

Junior Veterinary Examiner 2022

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ನವರಾತ್ರಿಯಲ್ಲಿ ಸಾಕಷ್ಟು ಗುಡ್‌ ನ್ಯೂಸ್‌ ಸಿಗಲಿದ್ದು, ಮೊದಲನೇ ಗುಡ್‌ ನ್ಯೂಸ್‌ ನವರಾತ್ರಿಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಹೊರಬಿದ್ದಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ 250 ಕಿರಿಯ ಪಶುವೈದ್ಯಕೀಯ ಪರೀಕ್ಷಕರ (ಪಶು ವೈದ್ಯಕೀಯ ಸಹಾಯಕರು) ನೇಮಕಕ್ಕೆ (Junior Veterinary Examiner 2022) ಅಧಿಸೂಚನೆ ಪ್ರಕಟಗೊಂಡಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕ ಪ್ರಕ್ರಿಯೆ ನಡೆಸಲಿದ್ದು, ಅಕ್ಟೋಬರ್‌ 05 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು 04-11-2022 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು 06-11-2022ರ ವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ಮೀಸಲಾತಿ ಹಂಚಿಕೆ ಇಂತಿದೆ:

Junior Veterinary Examiner 2022

ಯಾರು ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಯು ಬೀದರ್‌ನಲ್ಲಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪಶು ಆರೋಗ್ಯ(ಪಶುಸಂಗೋಪನೆ) ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆಯು ನಡೆಸುವ ಡೈರಿ/ಪೌಲ್ಟ್ರಿಗೆ ಸಂಬಂಧಿಸಿದ ಎರಡು ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್‌ (ಜೆಒಸಿ ಇನ್‌ಡೈರಿ/ಕುಕ್ಕುಟ(ಪೌಲ್ಟ್ರಿ) ನಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನದೊಳಗೆ ಈ ಎಲ್ಲ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.

ವಯೋಮಿತಿ ಎಷ್ಟು?
ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ- 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 750 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 500ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಚಲನ್‌ ಪಡೆದು ಇ-ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿದೆ.

ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಪಡೆದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದ್ದು, 100 ಅಂಕ ನಿಗದಿಪಡಿಸಲಾಗಿರುತ್ತದೆ. ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಪರೀಕ್ಷೆಯ ಪಠ್ಯಕ್ರಮವನ್ನು ಈಗಾಗಲೇ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವೇತನ ಎಷ್ಟಿರುತ್ತದೆ?
ವೇತನ ಶ್ರೇಣಿ : ರೂ.21,400-500-22,400-550-24,600-600-27,000-650-29,600-750-32,600-850-36,000-950-39,800-1,100-42,000

ಈ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗೆ ಲಿಂಕ್‌| https://cetonline.karnataka.gov.in/kea/kahvs

ಇದನ್ನೂ ಓದಿ| KPSC Recruitment 2022 | ಗ್ರೂಪ್‌ ಬಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ

Exit mobile version