ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಯನ್ನು (ಟಿಇಟಿ) (Kar TET 2023) ಸೆಪ್ಟೆಂಬರ್ 03ರ ಭಾನುವಾರದಂದು ನಡೆಸಲಿದ್ದು, ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಿದೆ. ಎಂದಿನಂತೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆಗಸ್ಟ್ 05 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಡೆಸುವ ‘ನೆಟ್’, ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮಾದರಿಯಲ್ಲಿಯೇ ಟಿಇಟಿ ಕೂಡ ನಡೆಯುತ್ತಿದೆ. ರಾಜ್ಯ ಸರ್ಕಾರ ನಡೆಸುವ ಶಿಕ್ಷಕರ ನೇಮಕಾತಿಯಲ್ಲಿ ಭಾಗವಹಿಸಲು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ಅಂಕ ಪಡೆಯಲು ಬಯಸುವವರು ಮರು ಪರೀಕ್ಷೆಯನ್ನು ಸಹ ತೆಗೆದುಕೊಳ್ಳಬಹುದು. ಈ ಪರೀಕ್ಷೆಯ ಅಂಕಗಳನ್ನು ಶಿಕ್ಷಕರ ನೇಮಕಾತಿಗೆ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ.
ಇತ್ತ ಗಮನಿಸಿ;
ಅರ್ಹತೆಗಳೇನು?
1 ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಶಿಕ್ಷಣದಲ್ಲಿ (D.El.Ed) ಎರಡು ವರ್ಷಗಳ ಡಿಪ್ಲೊಮಾ ಪಡೆದಿರಬೇಕು ಅಥವಾ ವಿಶೇಷ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೊಮಾ ಮಾಡಿರಬೇಕು. ಬಿಇಡಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.
ಇವರೆಲ್ಲರೂ ಟಿಇಟಿ ಪರೀಕ್ಷೆಯಲ್ಲಿ ಪತ್ರಿಕೆ-1 ಅನ್ನು ಬರೆಯಲು ಅರ್ಹರಾಗಿರುತ್ತಾರೆ.
6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ ಶೇ. 50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಎರಡು ವರ್ಷಗಳ D.El.Ed ಕೋರ್ಸಿನ ತೇರ್ಗಡೆಯಾಗಿರಬೇಕು ಅಥವಾ ಬಿ.ಇಡಿಯಲ್ಲಿ ಅಥವಾ ನಾಲ್ಕು ವರ್ಷಗಳ B.El.Ed ಯಲ್ಲಿ ಅಥವಾ ಅಥವಾ ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣದ ಪದವಿಯನ್ನು ಪಡೆದಿರಬೇಕು. ಬಿಎ/ಬಿಎಸ್ಸಿ ಪದವಿ ಮತ್ತು ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50(ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಗಳಿಸಿರಬೇಕು ಮತ್ತು ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣ ಪದವಿಯನ್ನು ಹೊಂದಿರಬೇಕು. ಈ ಅಭ್ಯರ್ಥಿಗಳು ಟಿಇಟಿ ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳನ್ನು ಬರೆಯಲು ಅರ್ಹರಾಗಿರುತ್ತಾರೆ.
ಗಮನಿಸಿ: ಅಂತಿಮ ವರ್ಷದಲ್ಲಿ /ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆ ಬರೆಯಲು ವಯೋಮಿತಿ ಇರುವುದಿಲ್ಲ. ಎನ್‌ಸಿಟಿಇಯಿಂದ ಮಾನ್ಯತೆ ಪಡೆದಂತಹ ಡಿಪ್ಲೊಮಾ/ ಪದವಿ ಕೋರ್ಸುಗಳನ್ನು ಮಾತ್ರ ವಿದ್ಯಾರ್ಹತೆಯಲ್ಲಿ ಪರಿಗಣಿಸಲಾಗಿದೆ.
ಎರಡು ವರ್ಷ ಡಿಎಲ್‌ಇಡಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವ ಹಾಗೂ ಎರಡು ವರ್ಷದ ಬಿ.ಇಡಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದ್ದು, ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಮಾಣ ಪತ್ರ ಮಾನ್ಯ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ಅರ್ಜಿ ಶುಲ್ಕ ಎಷ್ಟು?
ಆನ್‌ಲೈನ್‌ನಲ್ಲಿಯೇ ( ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ) ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಲು ಕೂಡ ಆಗಸ್ಟ್ 05 (ಮಧ್ಯರಾತ್ರಿ 12 ಗಂಟೆಯವರೆಗೆ) ಕೊನೆಯ ದಿನವಾಗಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಲನ್ ಮೂಲಕವೂ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಪರೀಕ್ಷೆ ಎಂದು?
ಸೆಪ್ಟೆಂಬರ್ 3 ರ ಭಾನುವಾರ ಟಿಇಟಿ ಪರೀಕ್ಷೆ ನಡೆಯುತ್ತದೆ. ಅಂದು ಬೆಳಗ್ಗೆ 9.30 ಮಧ್ಯಾಹ್ನ 12.00ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಡೆದರೆ ಮಧ್ಯಾಹ್ನ 2. 00 ರಿಂದ 4.30ರ ವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ವಿಷಯ ನಿಮ್ಮ ಗಮನದಲ್ಲಿರಲಿ!
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆಗಳು ಅಥವಾ ಸಮಸ್ಯೆ ಎದುರಾದಲ್ಲಿ ಇಲಾಖೆಯ ಸ್ಥಿರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು. ದೂರವಾಣಿ ಸಂಖ್ಯೆಗಳು ಇಂತಿವೆ; 080-22483140, 080-22228805, 080-22483145.
ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಕೊನೆಯ ದಿನಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮುಂದಾಗುವುದರಿಂದ ಸರ್ವರ್ ಮೇಲೆ ಹೊರೆಯಾಗಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಇದನ್ನೂ ಓದಿ: KTET Exam 2022 | ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಗೊಂದಲವೇ? ಈ ಪ್ರಶ್ನೋತ್ತರ ಓದಿ
ಅರ್ಜಿಯನ್ನು ಸಲ್ಲಿಸುವಾಗ ಸರಿಯಾಗಿ ನೋಡಿಕೊಂಡು ಸಲ್ಲಿಸಲು ಕೋರಲಾಗಿದೆ. ತಪ್ಪು ಮಾಹಿತಿ ನೀಡಿದಲ್ಲಿ ಅದಕ್ಕೆ ಅಭ್ಯರ್ಥಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಮ್ಮೆ ಅರ್ಜಿಯನ್ನು ಸಬ್‌ಮಿಟ್ (Submit) ಮಾಡಿದ ಮೇಲೆ ಯಾವುದೇ ಮಾಹಿತಿಯನ್ನು ಮತ್ತೆ ಭರ್ತಿ ಮಾಡಲು ಅವಕಾಶವಿರುವುದಿಲ್ಲ. ಈ ಸಂಬಂಧ ಅಭ್ಯರ್ಥಿಗಳು ಮನವಿ ಮಾಡಿದರೂ ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.