ಬೆಂಗಳೂರು: ಇನ್ನು ಮುಂದೆ ರಾಜ್ಯ ಸರ್ಕಾರದ ಕಚೇರಿಗಳಲ್ಲಿನ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವಾಗ ಮಹಿಳಾ ಅಭ್ಯರ್ಥಿಗಳಿಗೆ ಶೇ. 33 ರಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕಚೇರಿಗಳ ಕಾರ್ಯನಿರ್ವಹಣೆಗೆ ಅವಶ್ಯವಾದ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್- ಡಿ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ (outsourcing) ಭರ್ತಿ ಮಾಡಲಾಗುತ್ತಿದೆ. ಆದರೆ ಇದುವರೆಗೆ ಯಾವುದೇ ರೀತಿಯ ಮೀಸಲಾತಿಯನ್ನು ಈ ನೇಮಕದಲ್ಲಿ ಅಳವಡಿಸಿಕೊಂಡಿರಲಿಲ್ಲ. ಇದೀಗ ಈ ನೇಮಕ ಮಾಡಿಕೊಳ್ಳುವಾಗ ಮಹಿಳೆಯರಿಗೆ ಶೇ. 33 ಹುದ್ದೆಗಳನ್ನು ಮೀಸಲಿಡಬೇಕೆಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಈ ಸುತ್ತೋಲೆಯನ್ನು ಮೇ 19ರಂದೇ ಕಳುಹಿಸಿಕೊಡಲಾಗಿದೆ. ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳನ್ನು ಮಹಿಳೆಯರು ಕೂಡ ಸಮರ್ಥವಾಗಿ ನಿರ್ವಹಿಸಬಲ್ಲವರಾಗಿದ್ದಾರೆ. ಈ ಕಾರಣದಿಂದ ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳಲ್ಲಿ ಹಾಗೂ ಹುದ್ದೆಗಳಲ್ಲಿ ಶೇ. 33 ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ.
ಸರ್ಕಾರದ ಸುತ್ತೋಲೆ ಹೀಗಿದೆ
ಡಾಟಾ ಎಂಟ್ರಿ ಆಪರೇಟರ್, ಗ್ರೂಪ್-ಡಿ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವಾಗ ಹೊರಗುತ್ತಿಗೆ ಏಜನ್ಸಿಯವರಿಗೆ ಈ ಮೀಸಲು ಜಾರಿಮಾಡುವಂತೆ ಸೂಚಿಸಬೇಕು. ನೇಮಕಕ್ಕಾಗಿ ಪ್ರಕಟಣೆ ಹೊರಡಿಸುವಾಗ ಮತ್ತು ಟೆಂಡರ್ ಆಹ್ವಾನಿಸುವಾಗ ಈ ಸೂಚನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಸುದ್ದಿಯನ್ನೂ ಓದಿ:ಮೈಸೂರಿನ ಸೆಸ್ಕಾಂನಲ್ಲಿ ಅಪ್ರೆಂಟಿಸ್‌ಷಿಪ್ ಮಾಡಿ
ಸರ್ಕಾರದ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ಇನ್ನಿತರೆ ಸರ್ಕಾರಿ ವಲಯದ ಅಂಗ ಸಂಸ್ಥೆಗಳು ಕೂಡ ಈ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಸರ್ಕಾರ ಸೂಚಿಸಿದೆ. ಈ ಮೀಸಲು ಜಾರಿಯ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಉದ್ಭವಿಸಿದಲ್ಲಿ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳು ಅದನ್ನು ಪರಿಹರಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.