ಬೆಂಗಳೂರು: ಸರ್ಕಾರಿ ನೌಕರರಿಯ ನಿರೀಕ್ಷೆಯಲ್ಲಿದ್ದ ರಾಜ್ಯದ ಯುವ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಒಂದು ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ (Karnataka Budget 2023) ಪ್ರಕಟಿಸಲಾಗಿದೆ.
ʻʻರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ, ನಾಗರಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಹಾಗೂ ಯುವ ಜನತೆಗೆ ಹೆಚ್ಚಿನ ಉದ್ಯೋಗವಕಾಶವನ್ನು ಒದಗಿಸಲು ನಮ್ಮ ಸರ್ಕಾರವು ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ವಿಧಾನ ಸಭೆಯಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಕಲ್ಯಾಣ ಕರ್ನಾಟಕ (ಹೈಕ) ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಮ್ಮ ಸರ್ಕಾರವು ನಿರ್ಧರಿಸಿದೆ. ಈ ಎಲ್ಲಾ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು 2023-24ನೇ ಸಾಲಿನಲ್ಲಿಯೇ ಪೂರ್ಣಗೊಳಿಸಿ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಬದುಕುವ ದಾರಿ ಘೋಷಣೆ
ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದೇ ಇರುವ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ಅವಧಿಯ ವೃತ್ತಿಪರ ಸರ್ಟಿಫಿಕೇಟ್ ತರಬೇತಿ ನೀಡುವ ʻಬದುಕುವ ದಾರಿ’ ಎಂಬ ಹೊಸ ಯೋಜನೆಯನ್ನು ಶುಕ್ರವಾರ ಮಂಡಿಸಲಾಗಿರುವ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಈ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ 1,500 ರೂ. ಗಳ ಶಿಷ್ಯವೇತನವನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ಪೂರ್ಣಗೊಳಿಸಿರುವವರಿಗೆ Apprenticeship ಕಾರ್ಯಕ್ರಮದಡಿಯಲ್ಲಿ 3 ತಿಂಗಳಿಗೆ ಮಾಸಿಕ 1,500 ರೂ. ಗಳ ಶಿಶಿಕ್ಷು ಭತ್ಯೆಯನ್ನು ಸಹ ನೀಡಲಾಗುವುದು ಎಂದು ತಿಳಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ನಿರುದ್ಯೋಗಿಗಳಿಗೆ 2 ಸಾವಿರ ನೆರವು
ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಲು ʻಯುವಸ್ನೇಹಿ’ ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲಾಗತ್ತದೆ ಎಂದೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಯುವಜನರ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಯುವ ನೀತಿ 2022 ಅನ್ನು ರೂಪಿಸಲಾಗಿದೆ. ಗ್ರಾಮೀಣ ಯುವಕರ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾದ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10,000 ರೂ. ನಂತೆ ಸುತ್ತುನಿಧಿ ಹಾಗೂ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಒಂದು ಲಕ್ಷ ರೂ. ಒಳಗೊಂಡಂತೆ ಬ್ಯಾಂಕ್‌ಗಳ ಸಹಾಯದೊಂದಿಗೆ 5 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು ಎಂದೂ ತಿಳಿಸಲಾಗಿದೆ.
ಜವಳಿ ಪಾರ್ಕ್ ಮೂಲಕ ಉದ್ಯೋಗ
ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂತನ ಮೆಗಾ ಜವಳಿ ಪಾರ್ಕ್ ಮತ್ತು ರಾಜ್ಯದ 25 ಸ್ಥಳಗಳಲ್ಲಿ ಮಿನಿ ಜವಳಿ ಪಾರ್ಕ್ ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ಮೂಲಕ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಲಿದೆ.
ಒಟ್ಟಾರೆಯಾಗಿ ಇದರಿಂದಾಗಿ ಸುಮಾರು 25,000 ಜನರಿಗೆ ಉದ್ಯೋಗ ಸೃಜನೆಯಾಗಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಹಾಗೂ ವಿವಿಧ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಕರ್ನಾಟಕ ಉದ್ಯೋಗ ನೀತಿ 2022-25, ‘ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27’ ಹಾಗೂ ‘ವಿಶೇಷ ಹೂಡಿಕೆ ಪ್ರದೇಶ ಕಾಯಿದೆ, 2022’ ಅನ್ನು ಜಾರಿಗೊಳಿಸಲಾಗಿದೆ ಎಂದೂ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಪ್ರಸ್ತುತ ವರ್ಷದಲ್ಲಿ ರಾಜ್ಯ ಸರ್ಕಾರವು ಅನುಮೋದಿಸಿದ 393 ಕೈಗಾರಿಕಾ ಯೋಜನೆಗಳಿಂದ 2.37 ಲಕ್ಷ ಕೋಟಿ ರೂ. ಗಳ ಬಂಡವಾಳ ಹೂಡಿಕೆಯೊಂದಿಗೆ ಸುಮಾರು 2 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆ ಇದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ವಿದೇಶದಲ್ಲಿ ಉದ್ಯೋಗ ಪಡೆಯಲು ತರಬೇತಿ
ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ವತಿಯಿಂದ 8 ಜಿಲ್ಲೆಗಳಲ್ಲಿ ಸಂಪನ್ಮೂಲ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು 4 ಜಿಲ್ಲೆಗಳಲ್ಲಿ ಪೂರ್ವ ನಿರ್ಗಮನದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ : Karnataka Budget 2023: 8 ಲಕ್ಷ ಪಿಯು, ಡಿಗ್ರಿ ವಿದ್ಯಾರ್ಥಿಗಳಿಗೆ ಶುಲ್ಕರಹಿತ ಶಿಕ್ಷಣ, 1000 ‘ಮಕ್ಕಳ ಬಸ್ಸು’