Site icon Vistara News

ಅತಿಥಿ ಶಿಕ್ಷಕರ ಗೌರವಧನ 2,500 ರೂ. ಹೆಚ್ಚಳ; ಇನ್ನೂ 5 ಸಾವಿರ ಹುದ್ದೆ ನೇಮಕಕ್ಕೆ ಒಪ್ಪಿಗೆ

teacher transfer

teacher

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರ ಕೊನೆಗೂ ಅತಿಥಿ ಶಿಕ್ಷಕರ ಗೌರವ ಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಅತಿಥಿ ಶಿಕ್ಷಕರ ಮಾಸಿಕ ಗೌರವಧನವನ್ನು ತಲಾ 2,500 ರೂ. ಹೆಚ್ಚಿಸಲಾಗಿದೆ. ಇದುವರೆಗೆ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 7,500 ರೂ, ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 8,000 ರೂ. ಗೌರವಧನ ನೀಡಲಾಗುತ್ತಿತ್ತು.

ಸರ್ಕಾರಿ ಆದೇಶ

ಈ ಹೆಚ್ಚಳದ ಆದೇಶದಿಂದಾಗಿ ಇನ್ನು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು ಮಾಸಿಕ 10,000 ರೂ. ಪ್ರೌಢಶಾಲಾ ಅತಿಥಿ ಶಿಕ್ಷಕರು 10,500 ರೂ. ಗೌರವಧನ ಪಡೆಯಲಿದ್ದಾರೆ.

ಕೇಳಿದ್ದು ನಾಲ್ಕುವರೆ ಸಾವಿರ, ಕೊಟ್ಟಿದ್ದು ಎರಡೂವರೆ ಸಾವಿರ!

ಗೌರವಧನ ಬಹಳ ಕಡಿಮೆ ಇರುವ ಕಾರಣಕ್ಕೆ ಅರ್ಹರನ್ನು ನೇಮಿಸಿಕೊಳ್ಳುವುದೇ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ೧೨,೦೦೦ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ೧೫,೦೦೦ ಗೌರವಧನ ನೀಡುವಂತೆ ಸರ್ಕಾರವನ್ನು ಕೋರಿತ್ತು. ಆದರೆ ಈಗ ಎಲ್ಲ ಅತಿಥಿ ಶಿಕ್ಷಕರಿಗೆ ಕೇವಲ ೨,೫೦೦ ರೂ. ಮಾತ್ರ ಗೌರವಧನ ಹೆಚ್ಚಿಸಲಾಗಿದೆ.

ಇನ್ನೂ ೫ ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ
ಶಿಕ್ಷಕರ ನೇಮಕ ವಿಳಂಬವಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಿದ್ದು, ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೆಚ್ಚುವರಿಯಾಗಿ ಇನ್ನೂ ೧೦ ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಿತ್ತು.
ಸರ್ಕಾರ ಈ ಸಂಬಂಧವೂ ತೀರ್ಮಾನ ತೆಗೆದುಕೊಂಡಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನಾಲ್ಕು ಸಾವಿರ ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಒಂದು ಸಾವಿರ ಒಟ್ಟು ಐದು ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಈ ಐದು ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದ್ದು, ಇವರಿಗೂ ಈ ಗೌರವ ಧನ ಹೆಚ್ಚಳ ಅನ್ವಯವಾಗಲಿದೆ.
ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಮುಖ್ಯವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಕ್ರಮ ತೆಗೆದುಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

೨೭ ಸಾವಿರ ಶಿಕ್ಷಕರಿಗೆ ಲಾಭ

ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ ಈ ವರ್ಷ ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಒಟ್ಟು ೨೭,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಅವರೆಲ್ಲರೂ ಈ ಗೌರವಧನ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಗೌರವ ಧನ ಬಹಳ ಕಡಿಮೆ ಇದ್ದಿದ್ದರಿಂದ ಹೆಚ್ಚಿಸಬೇಕೆಂದು ಅತಿಥಿ ಶಿಕ್ಷಕರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು. ಕಡಿಮೆ ಗೌರವಧನವಿದೆ ಎಂಬ ಕಾರಣಕ್ಕೆ ಅರ್ಹ ಶಿಕ್ಷಕರು ದೊರೆಯುವುದು ಕಷ್ಟವಾಗಿ ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರಿತ್ತು.

ಇದನ್ನೂ ಓದಿ| http://ತುಮಕೂರುಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಆದ್ಯತೆ: ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

Exit mobile version