Site icon Vistara News

Teacher Recruitment 2022 | 15 ಸಾವಿರ ಶಿಕ್ಷಕರ ನೇಮಕ: ಪರೀಕ್ಷೆ ಫಲಿತಾಂಶ ಈಗ ವೆಬ್‌ನಲ್ಲಿ ಲಭ್ಯ

Teacher Recruitment 2022

ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಕಳೆದ ಮೇ 21 ಮತ್ತು 22 ರಂದು ನಡೆಸಲಾಗಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಲಾಗಿನ್‌ ಆಗಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಅಪ್ಲಿಕೇಷನ್‌ ನಂಬರ್‌ ಮತ್ತು ಜನ್ಮದಿನಾಂಕವನ್ನು ನಮೂದಿಸಿ, ಲಾಗಿನ್‌ ಆಗಲು ಅವಕಾಶ ನೀಡಲಾಗಿದೆ.

ಫಲಿತಾಂಶ ನೋಡಲು ವೆಬ್‌ : https://sts.karnataka.gov.in/GPSTRNHK/Relogin.aspx

ಪತ್ರಿಕೆ-1, ಪತ್ರಿಕೆ-2 ಮತ್ತು ಪತ್ರಿಕೆ-3 ಪರೀಕ್ಷೆಗಳಲ್ಲಿ ಅಭ್ಯರ್ಥಿಗಳುಗಳಿಸಿದ ವೈಯುಕ್ತಿಕ ಅಂಕಗಳನ್ನು ಒದಗಿಸಲಾಗಿದೆ. ಪರೀಕ್ಷಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಾಗೂ ಇನ್ನಿತರ ಕಾರಣಗಳಿಂದ ಒಟ್ಟು 61 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದ್ದು, ಇಬ್ಬರನ್ನು ಅನರ್ಹಗೊಳಿಸಲಾಗಿದೆ. ಈ ರೀತಿ ಫಲಿತಾಂಶ ಪ್ರಕಟವಾಗದಿರುವ 63 ಅಭ್ಯರ್ಥಿಗಳ ಹೆಸರನ್ನೂ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.

ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ: https://sts.karnataka.gov.in/GPSTRNHK/GPTRRESULTWithheldlist.pdf

15 ಸಾವಿರ ಹುದ್ದೆಗಳಿಗೆ ಕಳೆದ ಮೇ 21ಮತ್ತು 22 ರಂದು ನಡೆದ ಈ ಪರೀಕ್ಷೆ ಬರೆಯಲು 1,06,083 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶಿಕ್ಷಕ ಹುದ್ದೆಗೆ ಪರಿಗಣನೆಯಾಗಿರುವ ಅರ್ಜಿಗಳ ಸಂಖ್ಯೆ 74,116 ಮಾತ್ರ. ಪರೀಕ್ಷೆಗೆ ಶೇ.7ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಈಗ 69,159 ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ.

ತಿದ್ದುಪಡಿಗೆ ಅವಕಾಶ

ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮತ್ತು ಮೀಸಲಾತಿ ವಿವರಗಳನ್ನು ಹೊರತುಪಡಿಸಿ, ಆನ್‌ಲೈನ್‌ ಭರ್ತಿ ಮಾಡಿದ ವೈಯಕ್ತಿಕ ವಿವರಗಳಲ್ಲಿ (ಹೆಸರು, ತಂದೆ, ತಾಯಿಯ ಹೆಸರು, ಜನ್ಮದಿನಾಂಕ, ಪದವಿ, ಟಿಇಟಿ ಅಂಕ ಇತ್ಯಾದಿ) ತಪ್ಪುಗಳಿದ್ದರೆ ತಿದ್ದುಪಡಿ ಮಾಡಲು ಆಗಸ್ಟ್‌ 18 ರಿಂದ ಆಗಸ್ಟ್‌ 24 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಅಗತ್ಯವಿರುವ ಅಭ್ಯರ್ಥಿಗಳು ತಮ್ಮ ಮನವಿ ಪತ್ರ ಮತ್ತು ದಾಖಲೆಗಳೊಂದಿಗೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಬಹುದಾಗಿದೆ. ಅಂಚೆ ಅಥವಾ ಇನ್ನಿತರೆ ಯಾವುದೇ ವಿಧಾನದಲ್ಲಿ ಸಲ್ಲಿಸಲಾಗುವ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಗಸ್ಟ್‌ 24ರ ನಂತರ ಬರುವ ಮನವಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ|Education News | ಭಾವಿ ಶಿಕ್ಷಕರಿಗೆ ಸಿಹಿ ಸುದ್ದಿ; 5 ವರ್ಷ ವಯೋಮಿತಿ ಹೆಚ್ಚಿಸಿದ ರಾಜ್ಯ ಸರ್ಕಾರ

Exit mobile version