ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್ʼ (Agneepath) ಮೂಲಕ ಭಾರತೀಯ ಸೇನೆ ಸೇರಿ ನಾಲ್ಕು ವರ್ಷ ಸೇವೆ ಸಲ್ಲಿಸಿದ “ಅಗ್ನಿವೀರʼರಿಗೆ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಆಧ್ಯತೆ ನೀಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಿಸಿದ್ದಾರೆ.
ಈಗಾಗಲೇ ಅಗ್ನಿವೀರರಿಗೆ ಸಿಎಪಿಎಫ್, ಅಸ್ಸಾಂ ರೈಫಲ್ಸ್ ಮತ್ತಿತರ ಅರೆಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವಾಗ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದರು. ಇದೀಗ ರಾಜ್ಯ ಪೊಲೀಸ್ ಇಲಾಖೆಯ ನೇಮಕದಲ್ಲಿಯೂ ಇವರಿಗೆ ಆದ್ಯತೆ ನೀಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.
ಪೊಲೀಸ್ ಇಲಾಖೆಯು ಕಾನ್ಸ್‌ಟೇಬಲ್ ಹುದ್ದೆಯಿಂದ ಹಿಡಿದು ಸಬ್ ಇನ್ಸ್‌ಪೆಕ್ಟರ್ ಹುದ್ದೆಯವರೆಗೆ ಎಲ್ಲ ಹುದ್ದೆಗಳ ನೇಮಕದ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಈಗಾಗಲೇ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಇನ್ನು ಅಗ್ನಿವೀರರೂ ಇದೇ ರೀತಿಯಾಗಿ ಆದ್ಯತೆ ಪಡೆಯಲಿದ್ದಾರೆ.
ಭಾರತೀಯ ಸೇನೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ಅಗ್ನಿವೀರರಿಗೆ ಅತ್ಯುತ್ತಮ ತರಬೇತಿ ನೀಡಲಾಗಿರುತ್ತದೆ. ಅವರ ಅನುಭವ ಮತ್ತು ಸಾಮರ್ಥ್ಯವನ್ನು ರಾಜ್ಯ ಪೊಲೀಸ್ ಇಲಾಖೆಯೂ ಬಳಸಿಕೊಳ್ಳಲಿದೆ ಎಂದು ಸಚಿವ ಜ್ಞಾನೇಂದ್ರ ವಿವರಿಸಿದ್ದಾರೆ.
ಅಗ್ನಿಪಥ್ ಯೋಜನೆ ಮೂಲಕ ನೇಮಕಗೊಳ್ಳುವ ಎಲ್ಲರೂ ನಾಲ್ಕು ವರ್ಷಗಳ ನಂತರ ಸೇನೆಯಿಂದ ಹೊರಬರುವುದಿಲ್ಲ. ಈ ನಾಲ್ಕು ವರ್ಷ ಅತ್ಯುತ್ತಮ ಸಾಧನೆ ಮಾಡಿದ ಶೇ. 25 ರನ್ನು ಸೇನೆಯ ಕಾಯಂ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತದೆ. ಉಳಿದ ಶೇ. 75 ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ತೀರ್ಮಾನ ಮಹತ್ವದ್ದಾಗಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.
ಉದ್ಯೋಗದ ಅಭದ್ರತೆಯ ಕಾರಣದಿಂದ ಸೇನಾ ಸೇವಾಕಾಂಕ್ಷಿಗಳು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವಾಲಯದ ಈ ತೀರ್ಮಾನ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಹಲವಾರು ಬಹುರಾಷ್ಟ್ರೀಯ ಕಂಪನಿಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕುಗಳು ಅಗ್ನಿವೀರರನ್ನು ಭದ್ರತಾ ಕಾರ್ಯಗಳಿಗೆ ಬಳಸಿಕೊಳ್ಳಲು ಮುಂದೆ ಬಂದಿವೆ.
ಇದನ್ನೂ ಓದಿ | Agneepath | ಕೇಂದ್ರಕ್ಕೆ ʼಅಗ್ನಿʼ ಪರೀಕ್ಷೆ ತಂದೊಡ್ಡಿದ ಅಗ್ನಿಪಥ್ ಬಗ್ಗೆ ನಿಮಗೆಷ್ಟು ಗೊತ್ತು?