ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ (KEA Assistant Professor Recruitment 2021) 1, 242 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿಷಯವಾರು ತಾತ್ಕಾಲಿಕ ಮೆರಿಟ್ ಲಿಸ್ಟ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಅರ್ಜಿಯ ಸಂಖ್ಯೆ, ಅರ್ಹತೆ ಪಡೆದವರ ಹೆಸರು, ವಿಷಯಗಳಲ್ಲಿ ಪಡೆದ ಅಂಕ, ಐಚ್ಛಿಕ ವಿಷಯಗಳ ಅಂಕ, ಮೀಸಲಾತಿ ಕೆಟಗರಿ ಮತ್ತಿತರ ಮಾಹಿತಿ ಒದಗಿಸಲಾಗಿದೆ. ಪಟ್ಟಿಯಲ್ಲಿ ಎಲ್ಲ ಅಭ್ಯರ್ಥಿಗಳ ಮಾಹಿತಿಯನ್ನೂ ನೀಡಲಾಗಿದ್ದು, ಅರ್ಹತೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿಸಲಾಗಿದೆ.
ಕಳೆದ ಮಾರ್ಚ್ ೧೪, ೧೫ ಮತ್ತು ೧೬ ರಂದು ಈ ನೇಮಕಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ನಂತರ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿ, ಆಕ್ಷೇಪಣೆ ಪಡೆದು, ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಇದೀಗ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗಿದೆ. 2021 ರ ಸೆಪ್ಟೆಂಬರ್ ೩೦ ರಂದು ಈ ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿತ್ತು.
ಮೆರಿಟ್ ಪಟ್ಟಿ ನೋಡಲು ಲಿಂಕ್ ಇಲ್ಲಿದೆ: https://cetonline.karnataka.gov.in/kea/gfgc2021
ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ
2020ರ ನೇಮಕಾತಿ ನಿಯಮಗಳ ಅನ್ವಯ ಎರಡು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಒಟ್ಟು ಶೇಕಡವಾರು ಸಮಾನವಾಗಿದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅರ್ಹತೆಯ ಕ್ರಮವನ್ನು ಅವರ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗಿರುತ್ತದೆ. ವಯಸ್ಸಿನಲ್ಲಿ ಹಿರಿಯನಾದ ವ್ಯಕ್ತಿಯನ್ನು ಅರ್ಹತೆಯ ಕ್ರಮದಲ್ಲಿ ಉನ್ನತ ಸ್ಥಾನಕ್ಕೆ ಪರಿಗಣಿಸಲಾಗಿರುತ್ತದೆ.
ಇದಲ್ಲದೆ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಅಂಕಗಳು ಮತ್ತು ಹುಟ್ಟಿದ ದಿನಾಂಕವು ಸಮಾನವಾಗಿರುವ ಸಂದರ್ಭದಲ್ಲಿ ಅರ್ಹತೆಯ ಕ್ರಮವನ್ನು ನಿರ್ಧರಿಸಲು ಸರ್ಕಾರದಿಂದ ಸ್ಪಷ್ಟೀಕರಣವನ್ನು ಕೋರಲಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್| http://kea.kar.nic.in/
ಇದನ್ನೂ ಓದಿ | ಸಹಾಯಕ ಪ್ರೊಫೆಸರ್ ಆಯ್ಕೆ ಪ್ರಶ್ನೆಪತ್ರಿಕೆ ಸೋರಿಕೆ: ಚಾರ್ಜ್‌ಶೀಟ್ ಸಲ್ಲಿಕೆ, ಏನಿದೆ ಅದರಲ್ಲಿ?