ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority-KEA) ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳಿಗೆ ಅನ್ವಯವಾಗುವಂತೆ ಹಿಜಾಬ್ (Hijab Ban), ಟೋಪಿ ಸೇರಿದಂತೆ ತಲೆ ಮತ್ತು ಕಿವಿಯನ್ನು ಮುಚ್ಚುವ ಯಾವುದೇ ವಸ್ತ್ರಧಾರಣೆಯನ್ನು ನಿಷೇಧಿಸಲಾಗಿದೆ. ಕರ್ನಾಟಕ ಪ್ರವೇಶ ಪ್ರಾಧಿಕಾರ ನವೆಂಬರ್ 17 ಮತ್ತು 18ರಂದು ನಡೆಸುವ ಮುಂದಿನ ಪರೀಕ್ಷೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ.
ಕಳೆದ ಅಕ್ಟೋಬರ್ 28, 29ರಂದು ನಡೆದ ಪರೀಕ್ಷೆ ವೇಳೆ ಹಿಜಾಬ್‌ಗೆ ಅನುಮತಿ ನೀಡಿದ್ದು ಮತ್ತು ಮಾಂಗಲ್ಯ ಸರ, ಕಾಲುಂಗುರ ತೆಗೆಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರ ಜತೆಗೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿ ಪರೀಕ್ಷೆಯಲ್ಲಿ ಅಕ್ರಮವನ್ನೂ ನಡೆಸಲಾಗಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂದು ಪರೀಕ್ಷಾ ಪ್ರಾಧಿಕಾರವು ಹೊಸ ಆದೇಶವನ್ನು ಹೊರಡಿಸಿದೆ.
ʻʻಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸುವುದನ್ನು ಬಾಯಿ ಕಿವಿ ಹಾಗು ತಲೆ ಮುಚ್ಚುವ ವಸ್ತ್ರವನ್ನು / ಸಾಧನವನ್ನು ಧರಿಸುವುದನ್ನು ನಿಷೇಧಿಸಿದೆ.ʼʼ ಎಂದು ಹೊಸ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಹಿಜಾಬ್ ಬ್ಯಾನ್‌ಗೆ ಒತ್ತಡ ಜೋರಾಗಿತ್ತು
ಕೇಂದ್ರ ಸರ್ಕಾರ ನಡೆಸುವ ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ಪರೀಕ್ಷೆಗಳಲ್ಲೂ ಹಿಜಾಬ್ ಧರಿಸಲು ಅವಕಾಶವಿಲ್ಲ. ಹಾಗಿರುವಾಗ ಉದ್ಯೋಗ ನೇಮಕಾತಿಗಾಗಿ ಕೆಇಎ ನಡೆಸುವ ಪರೀಕ್ಷೆಗಳಲ್ಲಿ ಹಿಜಾಬ್‌ಗೆ ಅನುಮತಿ ನೀಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆಗ ಸಚಿವರು ಇದು ಕೆಇಎ ನಿಯಮಾವಳಿ ಎಂದು ಹೇಳಿದ್ದರು.
ಕಳೆದ ಪರೀಕ್ಷೆ ಸಂದರ್ಭದಲ್ಲಿ ಬ್ಲೂಟೂತ್ ಬಳಸಿಸ ಅಕ್ರಮ ನಡೆಸಿರುವುದರ ಹಿನ್ನೆಲೆಯಲ್ಲಿ ಈಗ ತಲೆ, ಕಿವಿ, ಬಾಯಿ ಮುಚ್ಚುವ ವಸ್ತುಗಳನ್ನು ನಿಷೇಧಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.
ಹಾಗಿದ್ದರೆ ವಸ್ತ್ರ ಸಂಹಿತೆ ಮತ್ತು ಇತರ ನಿಯಮಗಳು ಏನಿರುತ್ತವೆ?
18-11-2023 ಮತ್ತು 19-11-2023 ರಲ್ಲಿ ನಡೆಯುವ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆ ಕುರಿತಂತೆ ವಸ್ತ್ರ ಸಂಹಿತೆ ಹೀಗಿರಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.
ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ
- ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
- ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ/ ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ.
- ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು,
- ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟಗಳು ಇರಬಾರದು.
- ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ.
- ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆ, ಉಂಗುರ, ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ
- ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬೂಚ್‌ಗಳು ಅಥವಾ ಬಟನ್‌ಗಳಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ.
- ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.
- ಎತ್ತರವಾದ ಹಿಮ್ಮಡಿಯ ಶೂಗಳನ್ನು ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.
- ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ),
KEA: Dress code & other guidelines for Recruitment Exam which will start from 18th Nov. pic.twitter.com/uSZ5EomGrs
— KEA (@KEA_karnataka) November 13, 2023
ನಿಷೇಧಿತ ವಸ್ತುಗಳ ಪಟ್ಟಿ ಇಂತಿದೆ
- ಡ್ರೆಸ್ ಕೋಡ್ ಅನ್ನು ಅನುಸರಿಸುವುದರ ಜೊತೆಗೆ, ಕೆಳಗೆ ಪಟ್ಟಿ ಮಾಡಲಾದ ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ, ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.
- ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂ ಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ.
- ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗು ತಿನ್ನುವುದನ್ನು ನಿಷೇಧಿಸಲಾಗಿದೆ.
- ಪೆನ್ಸಿಲ್, ಪೇಪರ್, ಎಲೇಸರ್, ಜಾಮಿಟ್ರಿ ಬಾಕ್ಸ್ ಗಳು ಮತ್ತು ಲಾಗ್ ಟೇಬಲ್ ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ.
- ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸಿವುದನ್ನು ಬಾಯಿ ಕಿವಿ ಹಾಗು ತಲೆ ಮುಚ್ಚುವ ವಸ್ತ್ರವನ್ನು / ಸಾಧನವನ್ನು ಧರಿಸುವುದನ್ನು ನಿಷೇಧಿಸಿದೆ.
- ಯಾವುದೇ ರೀತಿಯ ಮಾಸ್ಕ್ ಅನ್ನು ಧರಿಸುವಂತಿಲ್ಲ.
ಪರೀಕ್ಷೆಯ ದಿನದಂದು ಈ ಕೆಳಗಿನ ವಸ್ತುಗಳನ್ನು ಮಾತ್ರ ತರಲು ಅನುಮತಿಸಲಾಗಿದೆ.
- ಪ್ರವೇಶ ಪತ್ರ ಎಲ್ಲಾ ಅಭ್ಯರ್ಥಿಗಳು ಖಡ್ಡಾಯವಾಗಿ ತರುವುದು,
- ಎರಡು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋವನ್ನು ತರುವುದು.
- ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ತರುವುದು ಖಡ್ಡಾಯಗೊಳಿಸಲಾಗಿದೆ.
- ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
ಮೇಲೆ ಹೇಳಲಾಗಿರುವ ಕೆ.ಇ.ಎ ನಿಯಮಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು, ಇಲ್ಲವಾದಲ್ಲಿ ನಿಯಮಾನುಸಾರ ಅಭ್ಯರ್ಥಿಗಳ ಮೇಲೆ ಕ್ರಮವನ್ನು ಜರುಗಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.