ಬೆಂಗಳೂರು: ಅಭ್ಯರ್ಥಿಗಳ ಒತ್ತಡಕ್ಕೆ ಕೊನೆಗೂ ಮಣಿದಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ (KEA Recruitment 2023) ನಿಗದಿಪಡಿಸಿದ್ದ ಅರ್ಜಿ ಶುಲ್ಕವನ್ನು ಕಡಿಮೆ ಮಾಡಿದೆ.
ಈಗ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500, ಹಿಂದುಳಿದ ವರ್ಗಗಳು- 2ಎ,2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 300 ರೂ. ಎಸ್‌ಸಿ, ಎಸ್‌ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 200 ರೂ. ಹಾಗೂ ವಿಕಲಚೇತನರು/ ಮಾಜಿ ಸೈನಿಕರಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಶುಲ್ಕವನ್ನು ಜೂನ್ 30 ರಿಂದ ಪಾವತಿಸಲು ಅವಕಾಶ ನೀಡಲಾಗತ್ತದೆ. ʻʻಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕ ಪಾವತಿಸುವುದಕ್ಕೆ ದಿನಾಂಕ 30-06-2023 ರ ಮಧ್ಯಾಹ್ನ1 ರ ನಂತರ ಚಲನ್ ಡೌನ್‌ಲೋಡ್ ಮಾಡಿಕೊಂಡು ಪಾವತಿಸಬಹುದಾಗಿದೆʼʼ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಪ್ರಕಟಿಸಿದ್ದ ಅಧಿಸೂಚನೆಯಲ್ಲಿ ಸಾಮಾನ್ಯ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 1,000 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 750 ರೂ., ಅಂಗವಿಕಲ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ 250 ರೂ. ನಿಗದಿಪಡಿಸಲಾಗಿತ್ತು. ಅರ್ಜಿ ಸಲ್ಲಿಸುವಾಗ ಚಲನ್ ಪಡೆದು ಇ-ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿತ್ತು.
ಅರ್ಜಿ ಶುಲ್ಕ ಪಾವತಿಸಲು ಒಂದು ಸಾವಿರ ರೂ. ನಿಗದಿಪಡಿಸಿರುವುದಕ್ಕೆ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಭ್ಯರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತಾದರೂ ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕೆಂದು ಸೂಚಿಸಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವುದೇ ದೊಡ್ಡ ಹೊರೆಯಾಗಿತ್ತು. ಈ ಸಂಬಂಧ ಅಭ್ಯರ್ಥಿಗಳ ಪರವಾಗಿ ಕೆಇಎ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಕರ್ನಾಟಕ ಸ್ಟೇಟ್ ಎಕ್ಸಾಮಿನೇಷನ್ ಅಸ್ಪಿರೆಂಟ್ಸ್ ಅಸೋಸಿಯೇಷನ್, ಕೂಡಲೇ ಶುಲ್ಕವನ್ನು ಕಡಿಮೆ ಮಾಡಿ, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಿತ್ತು.
ಕೆಇಎ ಹೇಳಿರುವುದೇನು?
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿನ ಒಟ್ಟು 386 ಹುದ್ದೆ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ 72, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ 26 ಹುದ್ದೆ ಒಟ್ಟು 670 ಹುದ್ದೆಗಳಿಗೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕ ಪ್ರಕ್ರಿಯೆ ನಡೆಸುತ್ತಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-06-2023 ಮಧ್ಯಾಹ್ನ 2 ಗಂಟೆಯಿಂದ
ಇ-ಅಂಚೆ ಕಚೇರಿಗಳಲ್ಲಿ ಶುಲ್ಕಪಾವತಿ (ಕಚೇರಿಯ ವೇಳೆಯಲ್ಲಿ) ಬೆಳಗ್ಗೆ11ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2023 ಸಂಜೆ 5.30ರ ವರೆಗೆ
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 25-07-2023
ಸಹಾಯವಾಣಿ ಸಂಖ್ಯೆ: 080-23460460
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea/
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಆಫ್‌ಲೈನ್‌ನಲ್ಲಿ ಮಾತ್ರ ಪಾವತಿಸಲು (ಅಂಚೆಕಚೇರಿ ಮೂಲಕ) ಅವಕಾಶ ನೀಡಲಾಗಿದೆ. ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ ಮತ್ತು ಪ್ರತ್ಯೇಕವಾಗಿ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ.
ಇದನ್ನೂ ಓದಿ : IBPS Clerk Recruitment 2023 : ಬ್ಯಾಂಕುಗಳಲ್ಲಿನ ಕ್ಲರ್ಕ್ ಹುದ್ದೆ; ಜುಲೈ 1 ರಿಂದ ಅರ್ಜಿ ಸಲ್ಲಿಕೆ ಶುರು
ಅರ್ಜಿ ಶುಲ್ಕವನ್ನು ಇಳಿಕೆ ಮಾಡಿರುವುದನ್ನು ಬಿಟ್ಟರೆ ನೇಮಕ ಪ್ರಕ್ರಿಯೆಯಲ್ಲಿ ಬೇರೆಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.