ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇಂದಿನಿಂದ ಆರಂಭಿಸಬೇಕಾಗಿದ್ದ ವಿವಿಧ ನಿಗಮ, ಮಂಡಳಿಗಳಲ್ಲಿನ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿನ ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು (KEA Recruitment 2023) ಮುಂದೂಡಿದೆ. ಇದರಿಂದ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿಲ್ಲ ಎಂದು ಕೆಇಎಯ ಮೂಲಗಳು ತಿಳಿಸಿವೆ. ಈ ನೇಮಕಕ್ಕೆ ಸಂಬಂಧಿಸಿದಂತೆ ಮಾ.15 ರಂದೇ ಪ್ರಕಟಣೆ ಹೊರಡಿಸಿದ್ದ ಕೆಇಎ ಮಾ.24 ರಂದು ವಿವರವಾದ ಅಧಿಸೂಚನೆ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ನಿಗದಿಯಂತೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಕೆಇಎ ಹೇಳಿತ್ತು. ಆದರೆ ನೇಮಕ ಪ್ರಕ್ರಿಯೆ ಮುಂದುವರಿಸಲು ಆಯೋಗ ಅನುಮತಿ ನೀಡದೇ ಇರುವುದರಿಂದ ನೇಮಕ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.
ಒಟ್ಟು 757 ಹುದ್ದೆಗಳಿಗೆ ಈ ನೇಮಕ ಪ್ರಕ್ರಿಯೆ ನಡೆಯಬೇಕಾಗಿತ್ತು. ಏ. 15 ರಂದು ವಿವರವಾದ ಅಧಿಸೂಚನೆ ಪ್ರಕಟವಾಗಬೇಕಾಗಿತ್ತು. ಏ. 17 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿತ್ತು. ಆದರೆ ವೆಬ್‌ಸೈಟ್‌ನಲ್ಲಿ ಯಾವ ಪ್ರಕಟಣೆಯನ್ನೂ ನೀಡಲಾಗಿಲ್ಲ. ಅರ್ಜಿ ಸಲ್ಲಿಸಲೂ ಅವಕಾಶ ನೀಡಲಾಗಿಲ್ಲ.
ʻʻಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ವಿವರವಾದ ಪ್ರಕಟಣೆ ನೀಡಿದ್ದ ಕೆಇಎ ನೇಮಕ ಪ್ರಕ್ರಿಯೆ ಆರಂಭಿಸುವ ಬಗ್ಗೆ ಭರವಸೆ ನೀಡಿತ್ತು. ಆದರೆ ಈಗ ಆರಂಭಿಸಿಲ್ಲ. ಈ ಬಗ್ಗೆ ಕನಿಷ್ಠ ಪ್ರಕಟಣೆ ಹೊರಡಿಸಿ, ಅಭ್ಯರ್ಥಿಗಳಿಗೆ ಮಾಹಿತಿ ನೀಡುವ ಸೌಜನ್ಯವನ್ನೂ ತೋರಿಸಿಲ್ಲʼʼ ಎಂದು ಅಭ್ಯರ್ಥಿಗಳು ಕೆಇಎ ವಿರುದ್ಧ ಕಿಡಿ ಕಾರಿದ್ದಾರೆ.
ʻʻಅರ್ಜಿ ಸಲ್ಲಿಸಲು ಅಗತ್ಯ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದ್ದೇನೆ. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗಿಲ್ಲ. ಈ ಬಗ್ಗೆ ವಿಚಾರಿಸೋಣ ಎಂದು ಪ್ರಾಧಿಕಾರದ ನಂಬರ್‌ಗಳಿಗೆ ಕರೆ ಮಾಡಿದರೆ ಯಾರೂ ಉತ್ತರಿಸುತ್ತಿಲ್ಲ. ವೆಬ್‌ಸೈಟ್‌ನಲ್ಲಿರುವ ಸಹಾಯವಾಣಿ ಸಂಖ್ಯೆಯಂತೂ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಬರುತ್ತಿದೆʼʼ ಎಂದು ಅಭ್ಯರ್ಥಿ ಕೆ.ಜಿ. ಗಣೇಶ್ “ವಿಸ್ತಾರ ನ್ಯೂಸ್ʼʼಗೆ ದೂರಿದ್ದಾರೆ.
ಈ ನೇಮಕಾತಿಗೆ ಸಂಬಂಧಿಸಿದ ಕೆಇಎ ಹೊರಡಿಸಿದ್ದ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ (Click Here ) ಮಾಡಿ.
ಯಾವೆಲ್ಲಾ ಹುದ್ದೆಗಳಿಗೆ ನೇಮಕ ನಡೆಯಬೇಕಿತ್ತು?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
- ಕಲ್ಯಾಣ ಅಧಿಕಾರಿ -12 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-3)
- ಕ್ಷೇತ್ರ ನಿರೀಕ್ಷಕರು – 60 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-15)
- ಪ್ರಥಮ ದರ್ಜೆ ಸಹಾಯಕರು -12 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-4)
- ಆಪ್ತ ಸಹಾಯಕರು- 02 (ಉಳಿಕೆ ಮೂಲ ವೃಂದ-2)
- ದ್ವಿತೀಯ ದರ್ಜೆ ಸಹಾಯಕರು -100 (ಉಳಿಕೆ ಮೂಲ ವೃಂದ-64 ಕಲ್ಯಾಣ ಕರ್ನಾಟಕ-36)
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
- ಸಹಾಯಕ ವ್ಯವಸ್ಥಾಪಕರು -10 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-2)
- ಗುಣಮಟ್ಟ ನಿರೀಕ್ಷಕರು – 23 (ಉಳಿಕೆ ಮೂಲ ವೃಂದ-18 ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್ -3)
- ಹಿರಿಯ ಸಹಾಯಕರು (ಲೆಕ್ಕ)- 33 (ಉಳಿಕೆ ಮೂಲ ವೃಂದ-26 ಕಲ್ಯಾಣ ಕರ್ನಾಟಕ-5, ಬ್ಯಾಕ್‌ಲಾಗ್ -2)
- ಹಿರಿಯ ಸಹಾಯಕರು -57 (ಉಳಿಕೆ ಮೂಲ ವೃಂದ-49 ಕಲ್ಯಾಣ ಕರ್ನಾಟಕ-08)
- ಕಿರಿಯ ಸಹಾಯಕರು – 263 (ಉಳಿಕೆ ಮೂಲ ವೃಂದ-244 ಕಲ್ಯಾಣ ಕರ್ನಾಟಕ-19)
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
- ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)- 10 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-1)
- ಸಹಾಯಕ ಎಂಜಿನಿಯರ್ (ಸಿವಿಲ್) (ಗ್ರೂಪ್-ಬಿ)- 1 (ಉಳಿಕೆ ಮೂಲ ವೃಂದ-1)
- ಸಹಾಯಕ ಗ್ರಂಥಾಪಾಲಕ (ಗ್ರೂಪ್-ಸಿ) – 1 (ಉಳಿಕೆ ಮೂಲ ವೃಂದ-1)
- ಸಹಾಯಕ (ಗ್ರೂಪ್-ಸಿ) – 27 (ಉಳಿಕೆ ಮೂಲ ವೃಂದ-25 ಕಲ್ಯಾಣ ಕರ್ನಾಟಕ-2)
- ಕಿರಿಯ ಸಹಾಯಕ (ಗ್ರೂಪ್-ಸಿ) -49 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-04)
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್ ಬಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್ಲಾಗ್-2)
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್ ಬಿ – 2 (ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
- ಆಪ್ತ ಕಾರ್ಯದರ್ಶಿ – ಗ್ರೂಪ್ ಸಿ – 1 (ಉಳಿಕೆ ಮೂಲ ವೃಂದ-1)
- ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್ ಸಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-2)
- ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ – 3 ( ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-2)
- ಸಹಾಯಕರು (ತಾಂತ್ರಿಕ) ಗ್ರೂಪ್ ಸಿ- 6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
- ಸಹಾಯಕರು (ತಾಂತ್ರಕೇತರ) ಗ್ರೂಪ್ ಸಿ -6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
ಮೈಸೂರು ಸೇಲ್ಸ್‌ಇಂಟರ್‌ನ್ಯಾಷನಲ್ ಲಿಮಿಟೆಡ್
- ಸಹಾಯಕ ವ್ಯವಸ್ಥಾಪಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
- ಮೇಲ್ವಿಚಾರಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
- ಪದವೀಧರ ಗುಮಾಸ್ತರು – 6 (ಉಳಿಕೆ ಮೂಲ ವೃಂದ-5, ಕಲ್ಯಾಣ ಕರ್ನಾಟಕ-1)
- ಗುಮಾಸ್ತರು – 13 (ಉಳಿಕೆ ಮೂಲ ವೃಂದ-12, ಕಲ್ಯಾಣ ಕರ್ನಾಟಕ-1)
- ಮಾರಾಟ ಪ್ರತಿನಿಧಿ / ಪ್ರೋಗ್ರಾಮರ್ – 6 (ಕಲ್ಯಾಣ ಕರ್ನಾಟಕ-6)
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳಿಗೆ ಸರ್ಕಾರದ ಆದೇಶದಂತೆ ಪ್ರತ್ಯೇಕವಾಗಿ ಅಧಿಸೂಚನೆ ಪ್ರಕಟಿಸಬೇಕಿರುತ್ತದೆ. ಕೆಇಎ ಮೂಲಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪ್ರಾಧಿಕಾರ ಈ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಇದನ್ನೂ ಓದಿ : KPSC Recruitment 2023 : ಫೆ.25 ರಂದು ನಡೆದ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಕಡ್ಡಾಯ ಕನ್ನಡ ಪರೀಕ್ಷೆ ಬರೆಯಬೇಕಿಲ್ಲ