ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಗೆ (KEA Recruitment ) ಸಂಬಂಧಿಸಿದಂತೆ ಸಮಸ್ಯೆ, ಗೊಂದಲಗಳಿದ್ದರೆ ಪ್ರಾಧಿಕಾರದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಫೋನ್ ಮಾಡಲು ಹೋಗಬೇಡಿ! ಇದನ್ನು ಕೆಇಎ ನಿಷೇಧಿಸಿದೆ!!
ಹೌದು, ಯಾವುದೇ ನೇಮಕಾತಿ ಕುರಿತು ನೀವು ಕಚೇರಿ ವೇಳೆಯಲ್ಲಿಯೇ ಅಧಿಕಾರಿ ಅಥವಾ ಸಿಬ್ಬಂದಿಗೆ ಕರೆ ಮಾಡಿ ಅನಾವಶ್ಯಕವಾಗಿ ಒತ್ತಡ ಹೇರಿ, ಮಾಹಿತಿ ಪಡೆಯಲು ಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಗಳನ್ನು ದುರ್ನಡತೆ ತೋರಿದ ಅಭ್ಯರ್ಥಿ ಎಂದು ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆಯಂತೆ.
ಈ ವಿಷಯವನ್ನು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವುದೇ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ತಮ್ಮ ಅಹವಾಲುಗಳನ್ನು ಇ-ಮೇಲ್ (keauthority-ka@nic.in) ಅಥವಾ ಪತ್ರದ ಮೂಲಕ ಮಾತ್ರ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಈ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ಕರ್ನಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ನ ಸಂಪರ್ಕಿಸಿ ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ, ಆಡಳಿತಾಧಿಕಾರಿಗಳ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ನೀಡಿದೆ. ಆದರೆ ಈಗ ಯಾರನ್ನೂ ಸಂಪರ್ಕಿಸಬೇಡಿ ಎಂದು ಪ್ರಕಟಣೆ ಹೊರಡಿಸಿರುವುದು ಆಶ್ಚರ್ಯ ಮೂಡಿಸಿದೆ.
ಪರೀಕ್ಷೆ ಮುಂದೂಡಿಕೆ
ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ (ಗ್ರೇಡ್-1) ನೇಮಕಕ್ಕೆ (Principal Recruitment) ನಿಗದಿಪಡಿಸಿದ್ದ ಲಿಖಿತ ಪರೀಕ್ಷೆಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ.
ಈ ಹಿಂದೆ ಫೆಬ್ರವರಿ 28ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಮಾರ್ಚ್ 4 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು.
ಆದರೆ ಈ ಪ್ರಸ್ತಾಪಿತ ದಿನಾಂಕದಂದು ನ್ಯಾಕ್ ಮಾನ್ಯತೆ ಕಾರ್ಯಕ್ರಮವಿರುವುದರಿಂದ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳು ಕೋರಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯವ್ಯಾಪಿ ಮಿಕ್ಕುಳಿದ ವೃಂದದ 265 ಮತ್ತು ಕಲ್ಯಾಣ ಕರ್ನಾಟಕದ 45 ಸೇರಿದಂತೆ ಒಟ್ಟು 310 ಹುದ್ದೆಗಳಿಗೆ ನೇಮಕ ನಡೆಯತ್ತಿದೆ.
ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea
ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ (KEA Assistant Professor Recruitment 2021) 1, 242 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಪಟ್ಟಿಯಲ್ಲಿ ಅರ್ಜಿಯ ಸಂಖ್ಯೆ, ಅರ್ಹತೆ ಪಡೆದವರ ಹೆಸರು, ಅಂಕ, ಮೀಸಲಾತಿ ಕೆಟಗರಿ ಮತ್ತಿತರ ಮಾಹಿತಿ ಒದಗಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿ ಈ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
2022ರ ಮಾರ್ಚ್ ೧೪, ೧೫ ಮತ್ತು ೧೬ ರಂದು ಈ ನೇಮಕಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ನಂತರ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿ, ಆಕ್ಷೇಪಣೆ ಪಡೆದು, ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಆಗಸ್ಟ್‌ನಲ್ಲಿ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗಿತ್ತು. ಕಳೆದ ಜನವರಿಯಲ್ಲಿ ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿತ್ತು. 2021 ರ ಸೆಪ್ಟೆಂಬರ್ ೩೦ ರಂದು ಈ ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿತ್ತು.
ಇದನ್ನೂ ಓದಿ : UPSC Recruitment 2023 : ಐಎಎಸ್, ಐಎಫ್‌ಎಸ್ ನೇಮಕಕ್ಕೆ ಅಧಿಸೂಚನೆ; ಈ ಬಾರಿ 1,105 ಹುದ್ದೆಗಳಿಗೆ ನೇಮಕ