ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಕೊನೆಗೂ ತಾನು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ತೀರ್ಮಾನಿಸಿದೆ. ಸದ್ಯವೇ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (KPSC CBRT Exam) ಆರಂಭಿಸಲಾಗುತ್ತಿದ್ದು (Computer based recruitment test-CBRT), ಇದಕ್ಕಾಗಿ ಈಗ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೊದಲಿಗೆ ಈ ಪರೀಕ್ಷೆ ಹೇಗೆ ನಡೆಯುತ್ತದೆ, ಇದರಿಂದ ಆಗುವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳಲು ಪ್ರಾಯೋಗಿಕ ಅಣಕು ಪರೀಕ್ಷೆ (Mock Test)ಯನ್ನು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಜನವರಿ 07 ರಂದು ಈ ಮಾಕ್ ಟೆಸ್ಟ್ ನಡೆಯಲಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪರೀಕ್ಷೆಯು ಪ್ರಾಯೋಗಿಕ ಪರೀಕ್ಷೆಯಾಗಿರುವುದರಿಂದ ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಇಂದಿನಿಂದ ಅಂದರೆ 23-12-2022 ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ 31-12-2022 ಕೊನೆಯ ದಿನವಾಗಿರುತ್ತದೆ. ಆಯ್ದ ಜಿಲ್ಲೆಗಳಲ್ಲಿ CBRT ಮಾದರಿಯಲ್ಲಿ (Mock Test) ಅಣಕು ಪರೀಕ್ಷೆಯನ್ನು ನಡೆಸಲಾಗುತ್ತಿರುವುದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ನಿಗದಿಪಡಿಸಿರುವ ಸಂಖ್ಯೆಯಷ್ಟು ಅರ್ಜಿ ಸ್ವೀಕೃತಗೊಂಡ ನಂತರ ಆ ಕೇಂದ್ರಕ್ಕೆ ಅರ್ಜಿ ಸ್ವೀಕೃತ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಆಯೋಗವು ತಿಳಿಸಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2022
ಅರ್ಜಿ ಶುಲ್ಕ : 100 ರೂ.
ಸಹಾಯವಾಣಿ ಸಂಖ್ಯೆ: 9310611990/8448513269
ವೆಬ್‌ಸೈಟ್ ವಿಳಾಸ: https://kpsc.kar.nic.in
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಮಾತ್ರ ಅಪ್ಲೋಡ್ ಮಾಡಬೇಕು. ಒಟ್ಟು ನಾಲ್ಕು ಹಂತಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.
ಅ) ಮೊದಲನೇ ಹಂತ : ಹೆಸರು, ಜನ್ಮದಿನಾಂಕ, ಮೀಸಲಾತಿಗಳು, ಇ-ಮೇಲ್ ಎಳಾಸ ಮತ್ತು ಮೊಬೈಲ್ ಸಂಖ್ಯೆ ಕುರಿತು ಮಾಹಿತಿಯನ್ನು ಭರ್ತಿ ಮಾಡಬೇಕು.
ಆ) ಎರಡನೇ ಹಂತ : ತಂದೆ, ತಾಯಿ, ಗಂಡ/ಹೆಂಡತಿ ಹೆಸರು, ವಿಳಾಸ ಹಾಗೂ ಪರೀಕ್ಷಾ ಕೇಂದ್ರದ ಕುರಿತು ಮಾಹಿತಿಯನ್ನು ಭರ್ತಿ ಮಾಡಬೇಕು
ಇ) ಮೂರನೇ ಹಂತ : ವಿದ್ಯಾರ್ಹತೆಯ ಕುರಿತು ಮಾಹಿತಿಯನ್ನು ಭರ್ತಿ ಮಾಡಬೇಕು.
ಈ) ನಾಲ್ಕನೇ ಹಂತ : ಭಾವಚಿತ್ರ ಮತ್ತು ಸಹಿಯನ್ನು ಮಾತ್ರ ಅಪ್ಲೋಡ್ ಮಾಡಬೇಕು.
ವಿದ್ಯಾರ್ಹತೆ ಮತ್ತು ವಯೋಮಿತಿ
ಕನಿಷ್ಟ ದ್ವಿತೀಯ ಪಿ.ಯು.ಸಿ/ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿದವರು ಈ ಮಾಕ್‌ಟೆಸ್ಟ್ ಬರೆಯಬಹುದು. ವಯೋಮಿತಿ: ಕನಿಷ್ಟ 18 ವರ್ಷಗಳು ಗರಿಷ್ಟ 40 ವರ್ಷಗಳು.
ಪರೀಕ್ಷೆ ಹೇಗಿರುತ್ತದೆ?
ಪರೀಕ್ಷೆಯನ್ನು ಪ್ರಾಯೋಗಿಕವಾಗಿ Computer based recruitment test-CBRT ಕರ್ನಾಟಕ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು ಎರಡು ಗಂಟೆಗಳ ಕಾಲ ನಡೆಯಲಿದೆ. ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲೂ ಸಿದ್ಧಪಡಿಸಲಾಗುತ್ತದೆ. ವಸ್ತುನಿಷ್ಠ (Objective type or multiple choice) ಮಾದರಿಯಲ್ಲಿರುತ್ತದೆ.
ಪ್ರತಿ ಪ್ರಶ್ನೆ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ 02 (ಎರಡು) ಅಂಕಗಳನ್ನು ನಿಗದಿಪಡಿಸಲಾ ಗಿರುತ್ತದೆ. ಪ್ರತಿ ಪ್ರಶ್ನೆಯು 04 (ನಾಲ್ಕು) ಆಯ್ಕೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಯು ತಪ್ಪು ಉತ್ತರ ನೀಡಿದಲ್ಲಿ ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕಗಳಲ್ಲಿ 1/4 ರಷ್ಟು ಅಂಕಗಳನ್ನು ದಂಡದ ರೂಪದಲ್ಲಿ ಕಳೆಯಲಾಗುತ್ತದೆ. ಅಭ್ಯರ್ಥಿಯು ಯಾವುದೇ ಪ್ರಶ್ನೆಗೆ ಉತ್ತರಿಸದೆ ಖಾಲಿ ಬಿಟ್ಟಲ್ಲಿ ಅಂದರೆ ಉತ್ತರವನ್ನು ನೀಡದಿದ್ದಲ್ಲಿ ಆ ಪ್ರಶ್ನೆಗೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. ಪರೀಕ್ಷೆಯ ಸಿಲಬಸ್ ಅನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ ಪಾವತಿಸುವುದು ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಾಂಭೀರ್ಯತೆ, ಇಚ್ಛೆ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಮಾತ್ರ ಈ ಮಾಕ್ ಟೆಸ್ಟ್ ಬರೆಯುವಂತೆ ಮಾಡಲು ಮತ್ತು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಸೀಮಿತಗೊಳಿಸುವ ಸಲುವಾಗಿ ಪ್ರತಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಯಾವುದೇ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯತಿ ನೀಡಲಾಗಿಲ್ಲ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ