ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ತಾನು ಇನ್ನು ಮುಂದೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ತೀರ್ಮಾನಿಸಿ, ಈ ಸಂಬಂಧ ಕಳೆದ ಶನಿವಾರ ನಡೆಸಿದ್ದ ಅಣಕು ಪರೀಕ್ಷೆ (KPSC CBRT Exam) ಯಶಸ್ವಿಯಾಗಿದೆ.
ಈ ಅಣಕು (Mock Test) ಪರೀಕ್ಷೆ ಬರೆಯಲು 5,437 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 30 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಪರೀಕ್ಷೆ ಬರೆಯಲು 4,248 ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆದರೆ ಸುಮಾರು 1,463 ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆ ಬರೆದಿದ್ದಾರೆ ಎಂದು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಕೆಲವು ಕೇಂದ್ರಗಳಲ್ಲಿ ನಿಗದಿಗಿಂತ ಕಡಿಮೆ ಪ್ರಮಾಣದ ಕಂಪ್ಯೂಟರ್‌ಗಳಿದ್ದುದ್ದರಿಂದ ಕೆಲ ಅಭ್ಯರ್ಥಿಗಳು ಪರೀಕ್ಷೆ ಬರೆಯಲಾಗದೆ ನಿರಾಸೆ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಮತ್ತೆ ಈ ಅಣಕು ಪರೀಕ್ಷೆ ನಡೆಸಲು ಆಯೋಗವು ಚಿಂತಿಸುತ್ತಿದೆ. ಈ ವಿಷಯವನ್ನು ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ತೀರ್ಮಾನಿಸಿ, ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕೆಪಿಎಸ್‌ಸಿಯ ಮೂಲಗಳು ತಿಳಿಸಿವೆ.
ಒಟ್ಟಾರೆಯಾಗಿ ಈ ಅಣುಕು ಪರೀಕ್ಷೆ ಯಶಸ್ವಿಯಾಗಿದೆ. ಹೀಗಾಗಿ ಇನ್ನು ಮುಂದೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಆರಂಭಿಸಲು (Computer based recruitment test-CBRT) ಆಯೋಗಕ್ಕೆ ದಾರಿ ಸುಗಮವಾದಂತಾಗಿದೆ. ಈ ಹಿಂದೆ ಎರಡು ಬಾರಿ ಕೆಪಿಎಸ್‌ಸಿಯು ಆನ್‌ಲೈನ್ ಪರೀಕ್ಷೆ ನಡೆಸಲು ಮುಂದಾಗಿತ್ತಾದರೂ ಕಾಲ ಕೂಡಿ ಬಂದಿರಲಿಲ್ಲ.
ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (Computer based recruitment test-CBRT) ನಡೆಸುವುದರಿಂದ ಆಯೋಗಕ್ಕೆ ಬೇಗ ಬೇಗನೆ ಪರೀಕ್ಷೆಗಳನ್ನು ಆಯೋಜಿಸಲು ಮತ್ತು ಮೌಲ್ಯಮಾಪನ ಮಾಡಲು ಸಾಧ್ಯವಾಗಲಿದೆ. ಸೀಮಿತ ಮಾನವ ಸಂಪನ್ಮೂಲದಲ್ಲಿ ಈ ಪರೀಕ್ಷೆಗಳನ್ನು ನಡೆಸುವುದು ಮತ್ತು ಮೌಲ್ಯ ಮಾಪನ ಮಾಡುವುದು ಆಯೋಗಕ್ಕೆ ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಸಿಆರ್‌ಬಿಟಿ ಮೂಲಕ ಯಶಸ್ವಿಯಾಗಿ ಎದುರಿಸಲು ಸಾಧ್ಯ. ಹೀಗಾಗಿ ಇನ್ನು ಮುಂದೆ ಕೆಪಿಎಸ್‌ಸಿಯು ಒಂದರ ಹಿಂದೊಂದರಂತೆ ಪರೀಕ್ಷೆ ನಡೆಸಬಹುದಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಆಯೋಗದ ಆಧಿಕಾರಿಯೊಬ್ಬರು “ವಿಸ್ತಾರನ್ಯೂಸ್ʼʼಗೆ ತಿಳಿಸಿದ್ದಾರೆ.
ಕೆಪಿಎಸ್‌ಸಿಯಲ್ಲಿನ ನೇಮಕ ಪ್ರಕ್ರಿಯೆಯು ಬಹಳ ವಿಳಂಬವಾಗುತ್ತಿರುವ ಬಗ್ಗೆ ಅಭ್ಯರ್ಥಿಗಳು ಸದಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೀಗ ಆಯೋಗದ ಪರೀಕ್ಷಾ ಘಟಕವು ಬಲಗೊಂಡಿದ್ದು, ಮುಂದೆ ತ್ವರಿತವಾಗಿ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ