ಬೆಂಗಳೂರು: 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್-‘ಎ’ಮತ್ತು ಗ್ರೂಪ್- ‘ಬಿ’ವೃಂದದ) 106 ಹುದ್ದೆಗಳ ನೇಮಕಕ್ಕೆ ಆಗಸ್ಟ್ ೧೬ ರಿಂದ ೨೬ರ ವರೆಗೆ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ನಡೆಯಲಿದೆ. ಗುರುವಾರ (ಜು.೨೮)ದಂದು ಅರ್ಹತಾ ಪಟ್ಟಿ ಪ್ರಕಟಿಸಿದ್ದ (KPSC KAS results 2022) ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಶುಕ್ರವಾರ (ಜು.೨೯) ಸಂದರ್ಶನದ ದಿನಾಂಕ ಪ್ರಕಟಿಸಿದೆ.
ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿಯ ಕೇಂದ್ರ ಕಚೇರಿಯಲ್ಲಿ ಈ ಸಂದರ್ಶನ ನಡೆಯಲಿದೆ. ಬೆಳಗ್ಗೆ 8.30 ರಿಂದ ಹಾಗೂ ಮಧ್ಯಾಹ್ನ 12 ರಿಂದ ಸಂದರ್ಶನ ಪ್ರಕ್ರಿಯೆ ಆರಂಭವಾಗಲಿದೆ. ನಿತ್ಯ ಸುಮಾರು 45 ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ.
ಈ ೧೦೬ ಹುದ್ದೆಗಳಿಗೆ ಒಟ್ಟು ೧,೬೫, ೨೫೮ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ೨೦೨೦ರ ಆಗಸ್ಟ್ ೨೪ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಅರ್ಜಿ ಸಲ್ಲಿಸಿದವರಲ್ಲಿ ಸುಮಾರು ಶೇ. ೫೦ ರಷ್ಟು ಮಂದಿ ಮಾತ್ರ ಅಂದರೆ ೮೩,೭೧೬ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಮುಖ್ಯ ಪರೀಕ್ಷೆಗೆ ೧:೨೦ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ೨೦,೧೨೦ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಮುಖ್ಯ ಪರೀಕ್ಷೆಯನ್ನು ೨೦೨೧ರ ಫೆಬ್ರವರಿ ೧೩ರಿಂದ ೧೬ರ ವರೆಗೆ ನಡೆಸಲಾಗಿತ್ತು. ಸುಮಾರು ೧೮ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆದು ಸುಮಾರು ಒಂದುವರೆ ವರ್ಷಗಳಾಗಿದ್ದರೂ ಫಲಿತಾಂಶ ಪ್ರಕಟವಾಗಿರಲಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕಳೆದ ಸೋಮವಾರ ಕೆಲ ಅಭ್ಯರ್ಥಿಗಳು ಕೆಪಿಎಸ್‌ಸಿ ಕಚೇರಿ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು.
ಇದರ ಬೆನ್ನಲ್ಲೇ ಗುರುವಾರ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿ, ೧:೩ರ ಅನುಪಾತದಲ್ಲಿ ಒಟ್ಟು ೩೧೮ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿತ್ತು. ಇದೀಗ ಸಂದರ್ಶನದ ದಿನಾಂಕವನ್ನೂ ನಿಗದಿಪಡಿಸಿದೆ. ಸಂದರ್ಶನದ ಪ್ರವೇಶ ಪತ್ರವನ್ನು ಮುಂದೆ ಆಯೋಗದ ವೆಬ್‌ನಲ್ಲಿಯೇ ಪ್ರಕಟಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: https://kpsc.kar.nic.in
ಇದನ್ನೂ ಓದಿ | KPSC Recruitment 2022 | ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ