ಬೆಂಗಳೂರು: “ನಾನು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಬಂದಿದ್ದರು. ಅವರ ಸರಳತೆ, ಅವರಾಡಿದ ಪ್ರೇರಣದಾಯಕ ಮಾತುಗಳು ನನಗೆ ಕೆಎಎಸ್ ಅಧಿಕಾರಿಯಾಗಲು ಪ್ರೇರಣೆ ನೀಡಿದವುʼʼ ಎಂದು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ (KPSC KAS results 2022) ಅತಿ ಹೆಚ್ಚು ಅಂಕ ಪಡೆದ ಬೆಳಗಾವಿಯ ರಶ್ಮೀ ಎಸ್. ಜಕಾತಿ ಹೇಳಿದ್ದಾರೆ.
ರಶ್ಮೀ ಅವರ ಪೋಷಕರು ಬೆಳಗಾವಿಯಲ್ಲಿ ಶಿಕ್ಷಕರು. “ನಮ್ಮ ತಂದೆ ನನಗೆ ಮೊದಲ ಪ್ರೇರಣೆ. ಅವರು ಶಿಕ್ಷಕರಾಗಿ ಮಾಡುತ್ತಿರುವ ಕೆಲಸ ನನಗೆ ಜನಸೇವೆ ಮಾಡಲು, ಸರ್ಕಾರಿ ಅಧಿಕಾರಿಯಾಗಬೇಕೆಂಬ ಅರಿವು ಮೂಡಿಸಿತ್ತು. ಅಲ್ಲದೆ ಅವರು ಹೇಳುತ್ತಿದ್ದ ಸ್ವಾಮಿ ವಿವೇಕಾನಂದ ಮತ್ತಿತರರ ಕಥೆಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿತು. ನಮ್ಮ ಶಾಲೆಯಲ್ಲಿ ಪ್ರತಿ ಸ್ವಾತಂತ್ರ್ಯ ದಿನಾಚರಣೆಗೆ ಅತಿಥಿಗಳನ್ನಾಗಿ ಎಸ್‌ಪಿ, ಜಿಲ್ಲಾಧಿಕಾರಿಗಳನ್ನು ಕರೆಸಲಾಗುತ್ತಿತ್ತು. ಆಗೆಲ್ಲಾ ನಾನೂ ಇವರಂತಾಗಬೇಕೆಂದುಕೊಳ್ಳುತ್ತಿದ್ದೆ. ಶಾಲಿನಿ ರಜನೀಶ್ ಅವರನ್ನು ನೋಡಿದ ನಂತರ, ಅವರ ಮಾತು ಕೇಳಿದ ನಂತರ ಈ ಬಗ್ಗೆ ಸ್ಪರ್ಷ ತೀರ್ಮಾನಕ್ಕೆ ಬಂದಿದ್ದೆʼʼ ಎಂದು ರಶ್ಮೀ ವಿವರಿಸಿದ್ದಾರೆ.
ಹುಲಿಯಾಳದ ವಿಶ್ವನಾಥರಾವ್ ದೇಶಪಾಂಡೆ ರೂರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (VDRIT)ಯಲ್ಲಿ ಬಿಟೆಕ್ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್‌ನಲ್ಲಿ) ಪದವಿ ಪಡೆದಿರುವ ಅವರು ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟೆಕ್ ಮಾಡಿದ್ದಾರೆ. ಸದ್ಯ ಬೆಂಗಳೂರಿನ ನಗರ ಸಿವಿಲ್ ಕೋರ್ಟ್‌ನಲ್ಲಿ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನು ಒಂದು ವರ್ಷಗಳ ಕಾಲ ಬೆಂಗಳೂರಿನ ಮಹೇಂದ್ರ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದೆ. ಆದರೆ ಆ ಕೆಲಸ ನನಗೆ ತೃಪ್ತಿ ನೀಡಲಿಲ್ಲ. ನಾನು ಮಾಡುತ್ತಿರುವ ಕೆಲಸದಿಂದ ಜನರಿಗೇನು ಪ್ರಯೋಜನ ಎಂಬ ಪ್ರಶ್ನೆ ಕಾಡಲಾರಂಭಿಸಿತು. ಹೀಗಾಗಿ ಈ ಕೆಲಸವನ್ನು ಬಿಟ್ಟು, ಜನ ಸೇವೆ ಮಾಡಲು ಸರ್ಕಾರಿ ಅಧಿಕಾರಿಯಾಗಬೇಕೆಂದು ದೃಢ ಸಂಕಲ್ಪ ಮಾಡಿದೆ ಎಂದು ರಶ್ಮೀ ಕೆಎಎಸ್ ಪರೀಕ್ಷೆ ಬರೆಯಲು ತೀರ್ಮಾನಿಸಿದ ಕುರಿತು ಹೇಳಿದ್ದಾರೆ.
ಕೋಚಿಂಗ್‌ಗೆ ಹೋಗದೆ ಅಭ್ಯಾಸ
“ನಾನು ಯಾವುದೇ ಕೋಚಿಂಗ್‌ಗೆ ಹೋಗಿಲ್ಲ. ಮೂರು ವರ್ಷಗಳ ಕಾಲ ಮನೆಯಲ್ಲಿಯೇ ಅಭ್ಯಾಸ ಮಾಡಿದೆʼʼ ಎನ್ನುವ ರಶ್ಮೀ, ಮಹಿಳೆಯರಿಗೆ ಈ ರೀತಿಯ ಸಾಧನೆ ಮಾಡಲು ಹಲವು ಅಡ್ಡಿಗಳಿರುತ್ತವೆ, ಮದುವೆ, ಮನೆಯ ಆರ್ಥಿಕ ಪರಿಸ್ಥಿತಿ ಹೀಗೆ… ಆದರೆ ಡೆಡಿಕೇಷನ್‌ನಿಂದ ಅಭ್ಯಾಸ ಮಾಡಿದರೆ ಯಶಸ್ಸು ಪಡೆಯಬಹುದು ಎಂದು ಹೇಳಿದ್ದಾರೆ.
ರಶ್ಮೀಯವರು ನೀಡಿದ ಟಾಪ್ 5 ಟಿಪ್ಸ್
೧. ಪರೀಕ್ಷೆಯ ಸಿಲಬಸ್ ನೋಡಿಕೊಂಡು ಅದಕ್ಕೆ ತಕ್ಕಂತೆ ಫೋಕಸ್ ಆಗಿ ಓದಿ.
೨. ನೀವು ಓದಿದ್ದು ಎಷ್ಟು ನೆನಪಿದೆಯೋ ಅಷ್ಟನ್ನು ಬರೆದು ಅಭ್ಯಾಸ ಮಾಡಿ.
೩. ಹೆಚ್ಚು ಹೆಚ್ಚು ಪ್ರಶ್ನೋತ್ತರಗಳಿಗೆ (MCQ Questions) ಉತ್ತರಿಸುತ್ತಾ ಅಭ್ಯಾಸ ಮಾಡಿ
೪. ಓದುವಾಗ ನಿಮ್ಮದೇ ನೋಟ್ಸ್ ಮಾಡಿಕೊಳ್ಳಿ. ಬೇರೆಯವರು ಮಾಡಿದ ನೋಟ್ಸ್‌ಗಿಂತ ನಿಮ್ಮದೇ ನೋಟ್ಸ್ ಅನ್ನು ನೀವು ಓದುವುದು ಒಳ್ಳೆಯದು.
೫. ಜಾಸ್ತಿ ಓದಬೇಕಾಗಿಲ್ಲ. ಓದಿದ್ದನ್ನು ಆಗಾಗ ರಿವಿಜನ್ ಮಾಡಲು ಮರೆಯಬೇಡಿ.
“ನಾನು ಕೋಚಿಂಗ್ ಹೋಗಲಿಲ್ಲ ನಿಜ, ಆದರೆ ಕೋಚಿಂಗ್‌ಗೆ ಬಳಸಲಾಗುವ ಪಠ್ಯವನ್ನು ಓದುತ್ತಿದ್ದೆ. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗೂ ಸಾಕಷ್ಟು ಪಠ್ಯ ಸಾಮಗ್ರಿಗಳು ಈಗ ದೊರೆಯುತ್ತವೆ. ಆದರೆ ನಾವು ಹೆಚ್ಚು ಸಾಮಗ್ರಿಗಳನ್ನು ಓದಬೇಕಾಗಿಲ್ಲ. ಸಿಲಬಸ್‌ನಲ್ಲಿ ತಿಳಿಸಿರುವ ವಿಷಯಗಳನ್ನು ಪೋಕಸ್ ಆಗಿ ಓದಿದರೆ ಸಾಕುʼʼ ಎಂದು ರಶ್ಮೀ ತಮ್ಮ ಯಶಸ್ಸಿನ ಗುಟ್ಟು ರಟ್ಟು ಮಾಡಿದ್ದಾರೆ.
ತಹಶೀಲ್ದಾರ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿರುವ ರಶ್ಮೀ ಎಸ್. ಜಕಾತಿ, ಲಿಖಿತ ಪರೀಕ್ಷೆಯಲ್ಲಿ 849 ಅಂಕ ಪಡೆದಿದ್ದರೆ, ಸಂದರ್ಶನದಲ್ಲಿ 40 ಅಂಕ ಪಡೆದಿದ್ದಾರೆ. ಒಟ್ಟಾರೆ 889 ಅಂಕ ಪಡೆದಿರುವ ಅವರು ಈ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ.
NCERT ಪುಸ್ತಕ ಓದಿ
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವುದಾದರೆ ದಿನದಲ್ಲಿ ಎಂಟು ಗಂಟೆ ಮಾತ್ರ ಓದಿದರೂ ಸಾಕಾಗುತ್ತದೆ. ನೀವು ಓದಿದ್ದನ್ನು ಬರೆದು ಅಭ್ಯಾಸ ಮಾಡಿ. ಮುಖ್ಯವಾಗಿ ರಾಜ್ಯಸರ್ಕಾರದ ಮತ್ತು ಎನ್‌ಸಿಇಆರ್‌ಟಿಯ (NCERT) ಪುಸ್ತಕಗಳನ್ನು ಓದಿ. ನಾನಂತೂ NCERTಯ ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡುತ್ತಿದ್ದೆ ಎಂದು ರಶ್ಮೀ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಟಿಪ್ಸ್ ನೀಡಿದ್ದಾರೆ.
ಅಂತಿಮ ಆಯ್ಕೆ ಪಟ್ಟಿ ನೋಡಲು ವೆಬ್‌ಸೈಟ್ ವಿಳಾಸ: https://kpsc.kar.nic.in
ಇದನ್ನೂ ಓದಿ | KPSC Recruitment 2022 | ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ