Site icon Vistara News

KPSC Recruitment 2022 | ಜೂನಿಯರ್‌ ಎಂಜಿನಿಯರ್‌ ನೇಮಕಕ್ಕೆ ಪರೀಕ್ಷೆ; ಪ್ರವೇಶ ಪತ್ರ ಬಿಡುಗಡೆ

KPSC Recruitment

ಕೆಪಿಎಸ್‌ಸಿ

ಬೆಂಗಳೂರು: ರಾಜ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ (RDWSD Karnataka) ಕಿರಿಯ ಅಭಿಯಂತರರ (Junior Engineer) (ಗ್ರೂಪ್‌-ಸಿ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ (KPSC Recruitment 2022) ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಡಿಸೆಂಬರ್‌ 24 ಮತ್ತು 25 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಪ್ರವೇಶ ಪತ್ರವನ್ನು ಆಯೋಗದ ವೆಬ್‌ ಸೈಟ್‌ನಲ್ಲಿ ಒದಗಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಪ್ಲಿಕೇಷನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ, ತಮ್ಮ ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಆಯೋಗದ ಸಹಾಯವಾಣಿ ಸಂಖ್ಯೆ: 1800-572-8707 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ಹೇಳಿದೆ.

ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ.

ಒಟ್ಟು 136 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಕಳೆದ ಮಾರ್ಚ್‌ನಲ್ಲಿ ಈ ನೇಮಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿತ್ತು.

ಪರೀಕ್ಷೆ ಹೇಗಿರುತ್ತದೆ?
ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ನೇಮಕಕ್ಕೆ ಅಭ್ಯರ್ಥಿಗಳು ಎರಡೂ ಪತ್ರಿಕೆಗಳನ್ನು ಬರೆಯಬೇಕಿರುವುದು ಕಡ್ಡಾಯವಾಗಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 100 ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧ ಪಟ್ಟಿದ್ದರೆ ಪತ್ರಿಕೆ-2 ಮೂರು ವಿಭಾಗಗಳನ್ನು ಹೊಂದಿರುತ್ತದೆ. ಅವುಗಳೆಂದರೆ;
ಸಾಮಾನ್ಯ ಕನ್ನಡ-35 ಅಂಕ, ಸಾಮಾನ್ಯ ಇಂಗ್ಲಿಷ್‌-35 ಅಂಕ, ಕಂಪ್ಯೂಟರ್‌ ಜ್ಞಾನ-30 ಅಂಕ.

ಪತ್ರಿಕೆ-1 ಪರೀಕ್ಷೆ ಬರೆಯಲು ಒಂದೂವರೆ ಗಂಟೆ ಹಾಗೂ ಪತ್ರಿಕೆ-2 ರ ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯ ಪಠ್ಯ ಕ್ರಮವನ್ನು ಆಯೋಗದ ವೆಬ್‌ನಲ್ಲಿ ಒದಗಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿದೆ. ಈ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದವರು ಮಾತ್ರ ನೇಮಕಕ್ಕೆ ಅರ್ಹರಾಗಿರುತ್ತಾರೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative) ನಡೆಸಲಾಗುತ್ತದೆ. ಆದರೆ ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು(1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅವರ ಪ್ರವೇಶ ಪತ್ರ ಹಾಗೂ ಅವರ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (ಚುನಾವಣಾ ಐಡಿ/ ಆಧಾರ್ ಕಾರ್ಡ್ / ಡ್ರೈವಿಂಗ್ ಲೈಸನ್ಸ್/ಪಾನ್ ಕಾರ್ಡ್/ಪಾಸ್ ಪೋರ್ಟ್ /ಸರ್ಕಾರಿ ನೌಕರರ ಐಡಿ) ಯನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕಿರುತ್ತದೆ, ತಪ್ಪಿದಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವನ್ನು ನೀಡಲಾಗುವುದಿಲ್ಲ ಹಾಗೂ ಡೌನ್‌ಲೋಡ್ ಮಾಡಿರುವ ಗುರುತಿನ ಚೀಟಿಗಳು/ಇತರೆ ಯಾವುದೇ ಗುರುತಿನ ಚೀಟಿಗಳು/ ಕಲರ್ ಜೆರಾಕ್ಸ್ ಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ತಿಳಿಸಿದೆ.

ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಮತ್ತು ನಿಯಮಗಳನ್ನು ಪ್ರವೇಶ ಪತ್ರದಲ್ಲಿ ಒದಗಿಸಲಾಗಿರುತ್ತದೆ ಎಂದು ಆಯೋಗವು ಪ್ರಕಟಣೆಯಲ್ಲಿ ಹೇಳಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ : https://kpsc.kar.nic.in/

ಇದನ್ನೂ ಓದಿ| KPSC Recruitment 2022 | ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ; ಇನ್ನು ಒಮ್ಮೆ ಬರೆದರೆ ಸಾಕು!

Exit mobile version