ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ “ಬಿʼʼ ವೃಂದದ ಹುದ್ದೆಗಳ (KPSC Recruitment 2022) ನೇಮಕಕ್ಕೆ ಅಧಿಸೂಚನ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ.
ಮೀನುಗಾರಿಕೆ ಇಲಾಖೆಯಲ್ಲಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು-8 ಹುದ್ದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ (ಬಿಬಿಎಂಪಿ) ತಮಿಳು ಉಪನ್ಯಾನಸಕ -3 ಹುದ್ದೆ (ಬ್ಯಾಕ್‌ಲಾಗ್), ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ-6 ಹುದ್ದೆ ಹಾಗೂ ಬಿಬಿಎಂಪಿಯಲ್ಲಿನ ಸಹಾಯಕ ಶಸ್ತ್ರಚಿಕಿತ್ಸಕರು (ಲೇಡಿ ಮೆಡಿಕಲ್ ಆಫೀಸರ್) ಒಂದು ಹುದ್ದೆಗೆ (ಇದು ಗ್ರೂಪ್ “ಎ” ಹುದ್ದೆಯಾಗಿದೆ) ನೇಕ ನಡೆಯಲಿದೆ.
ಎಂದಿನಿಂದ ಅರ್ಜಿ ಸಲ್ಲಿಕೆ?
ಮೀನುಗಾರಿಕೆ ಇಲಾಖೆಯಲ್ಲಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಹುದ್ದೆಗೆ ಸೆಪ್ಟೆಂಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, 19-10-2022 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು 20 -10-2022 ಕೊನೆಯ ದಿನವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ (ಬಿಬಿಎಂಪಿ) ತಮಿಳು ಉಪನ್ಯಾಸಕರ ಹಾಗೂ ಸಹಾಯಕ ಶಸ್ತ್ರಚಿಕಿತ್ಸಕರ ಹುದ್ದೆಗಳಿಗೆ ಸೆಪ್ಟೆಂಬರ್ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು 14-10-2022 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 15ರ ವರೆಗೆ ಅವಕಾಶವಿರುತ್ತದೆ.
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗಳಿಗೆ (ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು) ಸೆಪ್ಟೆಂಬರ್ 17 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 17-10-2022 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು 18-10-2022 ರ ವರೆಗೆ ಅವಕಾಶವಿರುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಮೀನುಗಾರಿಕೆ ಸಹಾಯಕ ನಿರ್ದೇಶಕರ ಹುದ್ದೆಗೆ Fisheries Sciences (B.F.Sc) ನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗೆ ಸಿರಿಕಲ್ಚರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್ಸಿ ಜತೆಗೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮ ಇನ್ ಸಿರಿಕಲ್ಚರ್ ಮಾಡಿದ ಹಾಗೂ ಬಾಟನಿ ಅಥವಾ ಜುವಾಲಜಿ ಅಥವಾ ಸಿರಿಕಲ್ಚರ್ ಅನ್ನು ಮುಖ್ಯ ವಿಷಯವಾಗಿ ಓದಿದ ಬಿಎಸ್ಸಿ ಪದವೀಧರರೂ ಅರ್ಜಿ ಸಲ್ಲಿಸಬಹುದಾಗಿದೆ.
ಅಗ್ರಿಕಲ್ಚರ್ (ಕೃಷಿ) ಅಥವಾ ಹಾರ್ಟಿಕಲ್ಚರ್ (ತೋಟಗಾರಿಕೆ) ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ತಮಿಳು ಉಪನ್ಯಾಸಕರ ಹುದ್ದೆಗೆ ತಮಿಳಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಾಗೂ ಪ್ರೌಢಶಾಲೆಯಲ್ಲಿ ಮೂರು ವರ್ಷ ಬೋಧನೆ ಮಾಡಿದ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸಹಾಯಕ ಶಸ್ತ್ರಚಿಕಿತ್ಸಕರ ಹುದ್ದೆಗೆ ಎಂಬಿಬಿಎಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ ೧೮ ರಿಂದ ೩೫ ವರ್ಷಗಳು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38ವರ್ಷಗಳು. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?
ಸಾಮಾನ್ಯ ಅಭ್ಯರ್ಥಿಗಳು ೬೦೦ ರೂ. ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ೩೦೦ ರೂ. ಹಾಗೂ ಮಾಜಿ ಸೈನಿಕರು ೫೦ ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.
ಪ್ರಕ್ರಿಯೆ ಶುಲ್ಕ (processing fees) ೩೫ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-೧, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳೂ ಸೇರಿದಂತೆ ಎಲ್ಲ ಅಭ್ಯರ್ಥಿಗಳು ಪಾವತಿಸಬೇಕಿರುತ್ತದೆ. ಈ ಶುಲ್ಕ ಪಾವತಿಸದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ನೇಮಕ ಹೇಗೆ?
ಗ್ರೂಪ್ ʼಬಿʼಯ ಹುದ್ದೆಗಳಾಗಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 300 ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧ ಪಟ್ಟಿದ್ದರೆ ಪತ್ರಿಕೆ-2 ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆಯಾಗಿರುತ್ತದೆ.
ಪತ್ರಿಕೆ-1 ಪರೀಕ್ಷೆ ಬರೆಯಲು ಒಂದೂವರೆ ಗಂಟೆ ಹಾಗೂ ಪತ್ರಿಕೆ-2 ರ ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯ ಪಠ್ಯ ಕ್ರಮವನ್ನು ಆಯೋಗದ ವೆಬ್‌ನಲ್ಲಿ ಒದಗಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿದೆ. ಈ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದವರು ಮಾತ್ರ ನೇಮಕಕ್ಕೆ ಅರ್ಹರಾಗಿರುತ್ತಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಮುಂದೆ ನೀಡಲಾಗುತ್ತದೆ. ಅಗತ್ಯ ಇರುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನೂ ಬರೆದು ಅರ್ಹತೆ ಪಡೆಯಬೇಕಿರುತ್ತದೆ.
ಬಿಬಿಎಂಪಿಯಲ್ಲಿನ ಹುದ್ದೆಗಳಿಗೆ ಮಾತ್ರ ಲಿಖಿತ ಪರೀಕ್ಷೆ, ಸಂದರ್ಶನ ಯಾವುದೂ ಇರುವುದಿಲ್ಲ. ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕ ನಡೆಯುತ್ತಿರುವುದರಿಂದ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿದ್ದ ಒಟ್ಟು ಅಂಕಗಳ ಶೇಕಡಾವಾರನ್ನು ಆಧರಿಸಿ, ವಯಸ್ಸನ್ನು ಪರಿಗಣಿಸಿ, ನೇಮಕ ಮಾಡಲಾಗುತ್ತದೆ. 29ರಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
ವೇತನ ಶ್ರೇಣಿ ಎಷ್ಟು?
ಮೀನುಗಾರಿಕೆ ಸಹಾಯಕ ನಿರ್ದೇಶಕರ ಹುದ್ದೆ , ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆ : ರೂ 40,900 ರಿಂದ 78,200 ರೂ.
ಸಹಾಯಕ ಶಸ್ತ್ರಚಿಕಿತ್ಸಕರ ಹುದ್ದೆ: ರೂ. 52,650- 97,100
ತಮಿಳು ಉಪನ್ಯಾಸಕರ ಹುದ್ದೆ: ರೂ. 43,100- 83,900
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ : https://kpsc.kar.nic.in
ಇದನ್ನೂ ಓದಿ| KPSC Recruitment 2022 | ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ