ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ (KPSC Recruitment 2022 ) ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಇನ್ನು ಮುಂದೆ ಒಮ್ಮೆ ಅರ್ಹತೆ ಪಡೆದರೆ ಸಾಕು. ಅದನ್ನು ಮುಂದಿನ ಇತರೆ ನೇಮಕಾತಿಯಲ್ಲಿ ಪರಿಗಣಿಸಲು ಕೆಪಿಎಸ್‌ಸಿಯು ತೀರ್ಮಾನಿಸಿದೆ.
ಇದರಿಂದ ಅಭ್ಯರ್ಥಿಯು ಪ್ರತಿ ಪರೀಕ್ಷೆಗೂ ಪದೇ ಪದೇ ಈ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ ಎಂದು ಅದು ಹೇಳಿದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲು ಉಂಟಾಗುವ ಸಂಪನ್ಮೂಲದ ತೊಂದರೆ ಮತ್ತು ಅಭ್ಯರ್ಥಿಗಳಿಗೆ ಪ್ರತಿ ಬಾರಿ ಪರೀಕ್ಷೆಯನ್ನು ಬರೆಯುವ ಪರಿಶ್ರಮವನ್ನು ತಪ್ಪಿಸಲು ಹಾಗೂ ಮೌಲ್ಯ ಮಾಪನದಿಂದ ಉಂಟಾಗುವ ವಿಳಂಬವನ್ನು ತಪ್ಪಿಸಲು ಆಯೋಗ ಈ ತೀರ್ಮಾನ ತೆಗೆದುಕೊಂಡಿದೆ.
2021ರ ನಂತರ ಹೊರಡಿಸಲಾಗಿರುವ ಅಧಿಸೂಚನೆಗಳನ್ನು ಒಟ್ಟುಗೂಡಿಸಿ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ಹಾಗೂ ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಅಭ್ಯರ್ಥಿಗಳಿಗೆ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡಲು ಆಯೋಗವು ತೀರ್ಮಾನಿಸಿದೆ.
ಫೆ.25ಕ್ಕೆ ಪರೀಕ್ಷೆ ನಿಗದಿ
ದಿನಾಂಕ: 15-12-2022ರಂದು ಪ್ರಕಟಿಸಲಾಗಿರುವ ವೇಳಾ ಪಟ್ಟಿಯಲ್ಲಿನ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದಿನಾಂಕ 21-01-2023 ಮತ್ತು 22-01-2023ರಂದು ಪರೀಕ್ಷೆ ನಿಗದಿಪಡಿಸಲಾಗಿರುವ ಹುದ್ದೆಗಳಿಗೆ
ನಡೆಸಲಾಗವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಹಾಗೂ ವೇಳಾ ಪಟ್ಟಿಯಲ್ಲಿನ ಎಲ್ಲಾ ಅಧಿಸೂಚನೆಗಳನ್ನು ಒಟ್ಟುಗೂಡಿಸಿ ದಿನಾಂಕ 25-02-2023ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಂದೆ ಆಯೋಗ ನಡೆಸುವ ನೇಮಕ ಪ್ರಕ್ರಿಯೆಯಲ್ಲಿ ಭಾಗಿಯಾದರೆ, ಪುನಃ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕಾಗಿಲ್ಲ.
ಅಭ್ಯರ್ಥಿಗಳು ಒಮ್ಮೆ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶ ಪ್ರಕಟವಾಗದ ಕಾರಣ ಅಥವಾ ಇನ್ನಿತರೆ ಕಾರಣಗಳಿಂದ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯಬೇಕಾದಲ್ಲಿ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಬಹುದಾಗಿರುತ್ತದೆ. ಈ ರೀತಿ ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆ ಬರೆದಲ್ಲಿ ಕೊನೆಯ ಬಾರಿ ಬರೆದ (Recent Most Examination) ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಈಗಾಗಲೇ ಅರ್ಹತೆ ಪಡೆದವರಿಗೆ ಅನ್ವಯವಾಗದು
ಈಗಾಗಲೇ ವಿವಿಧ ನೇಮಕ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯವಾಗದು. ಅವರು ಮತ್ತೊಮ್ಮೆ ಪರೀಕ್ಷೆ ಬರೆದು ಈ ಅರ್ಹತೆಯನ್ನು ಪಡೆಯಬೇಕಾಗಿರುತ್ತದೆ ಎಂದು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ