Site icon Vistara News

KPSC Recruitment 2022 | ಕೆಪಿಎಸ್‌ಸಿಯಿಂದ ಈ ವರ್ಷ ನೇಮಕಾತಿಯ ಹೊಸ ಅಧಿಸೂಚನೆಗಳಿಲ್ಲ

KPSC Recruitment 2022

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಈ ವರ್ಷ ಅಂದರೆ 2022 ರ ಅಂತ್ಯದವರೆಗೂ ನೇಮಕಾತಿಗೆ (KPSC Recruitment 2022) ಸಂಬಂಧಿಸಿದಂತೆ ಯಾವುದೇ ಹೊಸ ಅಧಿಸೂಚನೆಯನ್ನು ಹೊರಡಿಸುವುದಿಲ್ಲ. ಈ ವಿಷಯವನ್ನು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದ್ದಾರೆ.

ಮಂಗಳವಾರ ಯೂಟೂಬ್‌ ಲೈವ್‌ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರ ಅಕ್ಟೋಬರ್‌ 22 ರಂದು ಸುಗ್ರೀವಾಜ್ಞೆಯನ್ನು ಹೊರಡಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.17 ಮತ್ತು ಶೇ.7 ಕ್ಕೆ ಏರಿಸಿರುವುದರಿಂದ ಇದನ್ನು ಜಾರಿಗೆ ತರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ದಿನಾಂಕ:18-11-022ರಂದು ಸುತ್ತೋಲೆಯನ್ನು ಹೊರಡಿಸಿದೆ. ಹೀಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವ ಇಲಾಖೆಗಳಿಗೆ ಈ ಹೊಸ ಮೀಸಲಾತಿಯ ಅನ್ವಯ, ಹುದ್ದೆಗಳನ್ನು ಹಂಚಿ, ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿದೆ.

ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಡಿಸೆಂಬರ್‌ ಅಂತ್ಯದವರೆಗೆ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ. ಈಗಾಗಲೇ ಕೆಪಿಎಸ್‌ಸಿಯು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 700 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸುವುದಾಗಿ ಪ್ರಕಟಿತ್ತು. ಈ ಹೊಸ ಮೀಸಲಾತಿ ನಿಯಮದಿಂದಾಗಿ ಈ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಬೀಳುವುದು ತಡವಾಗುವುದು ಈಗ ಖಚಿತವಾದಂತಾಗಿದೆ.

ಗೊಂದಲ ಬೇಡ
ಹೊಸ ಮೀಸಲಾತಿ ನಿಯಮವು ಈಗಾಗಲೇ ಪ್ರಕಟವಾಗಿರುವ ಅಧಿಸೂಚನೆಗಳಿಗೆ ಅನ್ವಯವಾಗುವುದಿಲ್ಲ. “ದಿನಾಂಕ: 01-11-2022ರ ಮುಂಚಿತವಾಗಿ ಅಧಿಸೂಚನೆ ಹೊರಡಿಸಿರುವ ಹುದ್ದೆಗಳ ನೇಮಕಾತಿಗಳನ್ನು ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ನಿಯಮಗಳನ್ವಯವೇ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದುʼʼ ಎಂದು ವಿಕಾಸ್‌ ಕಿಶೋರ್‌ ಸುರಳ್ಕರ್‌ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕೆಪಿಎಸ್‌ಸಿಯು ಈ ಬಗ್ಗೆ ಹಲವಾರು ಬಾರಿ ಸ್ಪಷ್ಟನೆ ನೀಡಿದೆ. ಅದರೂ ಅಭ್ಯರ್ಥಿಗಳು ಗೊಂದಲ ಮಾಡಿಕೊಂಡು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಹೊಸದಾಗಿ ಹೊರಡಿಸಲಾಗುವ ಹುದ್ದೆಗಳಿಗೆ ಈ ಮೀಸಲಾತಿ ನಿಯಮ ಅನ್ವಯವಾಗುವುದರಿಂದ ಕೆಪಿಎಸ್‌ಸಿಯು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಹೊಸ ನಿಯಮದಂತೆ ಹುದ್ದೆಗಳನ್ನು ವಿಂಗಡಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ. ಹೀಗಾಗಿ ಇನ್ನು ಮುಂದೆ ನಡೆಯುವ ನೇಮಕಾತಿಗಳಲ್ಲಿ ಮಾತ್ರ ಹೊಸ ಮೀಸಲಾತಿ ನಿಯಮಗಳು ಅನ್ವಯವಾಗಲಿವೆ ಎಂದು ವಿವರಿಸಿದ್ದಾರೆ.

ಎಂಜಿನಿಯರ್‌ಗಳಿಗೂ ಅವಕಾಶ
ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ನಿರೀಕ್ಷಕರ ಹುದ್ದೆಗಳಿಗೆ ಮುಂದೆ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಹುದ್ದೆಗಳಿಗೆ ಬಹುತೇಕವಾಗಿ ಎಂಜಿನಿಯರ್‌ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದ್ದಾರೆ. ಈ ಕುರಿತ ಅಭ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈಗಾಗಲೇ ಇಲಾಖೆಯು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ. ನಿಗದಿತ ವಿದ್ಯಾರ್ಹತೆಯಂತೆಯೇ, ಗಣಿತವನ್ನು ಅಭ್ಯಾಸ ಮಾಡಿರುವ ಇತರ ಪದವೀಧರರನ್ನೂ ಈ ಬಾರಿ ನೇಮಕದ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | KPSC Recruitment 2022 | ಸರ್ಕಾರ ಇಲಾಖೆಗಳಲ್ಲಿ 700 ಹುದ್ದೆ; ಸದ್ಯವೇ ಕೆಪಿಎಸ್‌ಸಿ ಅಧಿಸೂಚನೆ

Exit mobile version