ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ “ಸಿʼʼ ವೃಂದದ ಕಾರ್ಮಿಕ ನಿರೀಕ್ಷಕರ ಹುದ್ದೆಗಳ (KPSC Recruitment 2022) ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ.
ಉಳಿಕೆ ಮೂಲ ವೃಂದದ 20 ಹಾಗೂ ಕಲ್ಯಾಣ ಕರ್ನಾಟಕ ವೃಂದದ ೬ ಸೇರಿ ಒಟ್ಟು ೨೬ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 29 ಕೊನೆಯ ದಿನವಾಗಿರುತ್ತದೆ. ಕಲ್ಯಾಣ ಕರ್ನಾಟಕದ ಹುದ್ದೆಗಳಿಗೆ ಅಕ್ಟೋಬರ್ 30 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಯಾವುದೇ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದೊಳಗೆ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕಾದದು ಕಡ್ಡಾಯ.
ವಯೋಮಿತಿ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ ೧೮ ರಿಂದ ೩೫ ವರ್ಷಗಳು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38ವರ್ಷಗಳು. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?
ಸಾಮಾನ್ಯ ಅಭ್ಯರ್ಥಿಗಳು ೬೦೦ ರೂ. ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ೩೦೦ ರೂ. ಹಾಗೂ ಮಾಜಿ ಸೈನಿಕರು ೫೦ ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.
ಪ್ರಕ್ರಿಯೆ ಶುಲ್ಕ (processing fees) ೩೫ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-೧, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳೂ ಸೇರಿದಂತೆ ಎಲ್ಲ ಅಭ್ಯರ್ಥಿಗಳು ಪಾವತಿಸಬೇಕಿರುತ್ತದೆ. ಈ ಶುಲ್ಕ ಪಾವತಿಸದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಅಧಿಸೂಚನೆಗಳನ್ನು ಇಲ್ಲಿ ಓದಿ | https://kpsc.kar.nic.in/index.html
ನೇಮಕ ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 100 ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧ ಪಟ್ಟಿದ್ದರೆ ಪತ್ರಿಕೆ-2 ಮೂರು ವಿಭಾಗಗಳನ್ನು ಹೊಂದಿರುತ್ತದೆ. ಅವುಗಳೆಂದರೆ;
ಸಾಮಾನ್ಯ ಕನ್ನಡ-35 ಅಂಕ, ಸಾಮಾನ್ಯ ಇಂಗ್ಲಿಷ್-35 ಅಂಕ, ಕಂಪ್ಯೂಟರ್ ಜ್ಞಾನ-30 ಅಂಕ.
ಪತ್ರಿಕೆ-1 ಪರೀಕ್ಷೆ ಬರೆಯಲು ಒಂದೂವರೆ ಗಂಟೆ ಹಾಗೂ ಪತ್ರಿಕೆ-2 ರ ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯ ಪಠ್ಯ ಕ್ರಮವನ್ನು ಆಯೋಗದ ವೆಬ್‌ನಲ್ಲಿ ಒದಗಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿದೆ. ಈ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದವರು ಮಾತ್ರ ನೇಮಕಕ್ಕೆ ಅರ್ಹರಾಗಿರುತ್ತಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಮುಂದೆ ನೀಡಲಾಗುತ್ತದೆ. ಅಗತ್ಯ ಇರುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನೂ ಬರೆದು ಅರ್ಹತೆ ಪಡೆಯಬೇಕಿರುತ್ತದೆ. ಪರೀಕ್ಷಾ ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವೇತನ ಶ್ರೇಣಿ ಎಷ್ಟು?
ರೂ. 33,450-62,600
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ : https://kpsc.kar.nic.in