ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ವಿವಿಧ ಹುದ್ದೆಗಳ ನೇಮಕಕ್ಕೆ (KPSC Recruitment 2023) ಅರ್ಜಿ ಆಹ್ವಾನಿಸಿದೆ. ಎಲ್ಲರಿಗೂ ತಿಳಿದಿರುವಂತೆ ಕೆಪಿಎಸ್‌ಸಿಯು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದ್ದು, ಈಗ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಸದಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿದೆ.
ʻʻಈಗಾಗಲೇ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಕೂಡ ಹೊಸದಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು. ಇನ್ನು ಮುಂದೆ ಅರ್ಜಿ ಸಲ್ಲಿಸುವಾಗ ಮತ್ತೆ ಹೆಸರು ನೊಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲʼʼ ಎಂದು ಕೆಪಿಎಸ್‌ಸಿಯು ತಿಳಿಸಿದೆ.
ಅರ್ಜಿ ಸಲ್ಲಿಕೆಗೆ ಮಾರ್ಚ್ 23 ರಿಂದ ಹೊಸ ಪೊರ್ಟಲ್ ಆರಂಭಿಸಲಾಗಿದೆ. ಹಳೆಯ ಪೊರ್ಟಲ್‌ನಲ್ಲಿ ಹೆಸರು ನಿಂದಾಯಿಸಿಕೊಂಡಿದ್ದರೆ ಹೊಸ ಪೊರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದು. ಹೀಗಾಗಿ ಇನ್ನು ಮುಂದೆ ಅರ್ಜಿ ಸಲ್ಲಿಸುವವರು ಹೊಸದಾಗಿ ಹೆಸರು ನೊಂದಾಯಿಸಿಕೊಂಡೇ ಅರ್ಜಿ ಸಲ್ಲಿಸಿ ಎಂದು ಕೆಪಿಎಸ್‌ಸಿಯ ಸೂಚಿಸಿದೆ.
ಅಭ್ಯರ್ಥಿಗಳಿಗೆ ಸುಲಭವಾಗಿ ಹೆಸರು ನೊಂದಾಯಿಸಿಕೊಳ್ಳಲು, ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಹೊಸ ಪೊರ್ಟಲ್ ರೂಪಿಸಲಾಗಿದೆ. ಇನ್ನು ಮುಂದೆ ಒಮ್ಮೆ ಹೆಸರು ನೊಂದಾಯಿಸಿಕೊಂಡರೆ ಮತ್ತೆ ಹೆಸರು ನೊಂದಾಯಿಸಿಕೊಳ್ಳದೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೆಪಿಎಸ್‌ಸಿಯು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಹೆಸರು ನೊಂದಾವಣೆಗೆ ಶುಲ್ಕವಿಲ್ಲ
ಕೆಪಿಎಸ್‌ಸಿಯು ಅರ್ಜಿ ಆಹ್ವಾನಿಸಿದಾಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮೊದಲಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕಿರುತ್ತದೆ. ಈ ಸಂದರ್ಭದಲ್ಲಿ ಅಭ್ಯರ್ಥಿಯು ತಮ್ಮ ಹೆಸರು, ಇ-ಮೇಲ್ ವಿಳಾಸ, ಪೋನ್ ನಂಬರ್, ಜನ್ಮದಿನಾಂಕ ಮತ್ತು ತಮ್ಮ ಆಯ್ಕೆಯ ಪಾಸ್‌ವರ್ಡ್ ಅನ್ನು ದಾಖಲಿಸಬೇಕಾಗಿರುತ್ತದೆ.
ಹೀಗೆ ದಾಖಲಸಿಕೊಂಡ ಅಭ್ಯರ್ಥಿಗಳಿಗೆ ಇ-ಮೇಲ್ ಅಥವಾ ಪೋನ್‌ನಲ್ಲಿ ಓಟಿಪಿ ಕಳುಹಿಸಲಾಗುತ್ತದೆ. ಇದನ್ನು ದಾಖಲಿಸಿದರೆ ರಿಜಿಸ್ಟೇಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದಕ್ಕೆ ಅಭ್ಯರ್ಥಿಯು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
ಆ ನಂತರ ಅಭ್ಯರ್ಥಿಗಳು ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು, ತಮ್ಮ ಆಯ್ಕೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಅಂತಿಮ ಹಂತದಲ್ಲಿ (ಸ್ಟೆಪ್-3) ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ. ಅರ್ಜಿ ಶುಲ್ಕ ಪಾವತಿಸಿದ ನಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಸದ್ಯ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರ ಮತ್ತು ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಲ್ಲದೆ ಮಾ. 30 ರಿಂದ ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಸದಾಗಿ ಹೆಸರು ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕಿರುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮದೇ ಆದ ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಹೊಂದಿರಬೇಕಾದದು ಕಡ್ಡಾಯ. ಇದಲ್ಲದೆ, ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಲು ತಮ್ಮ ಭಾವಚಿತ್ರವನ್ನು, ಸಹಿಯನ್ನು ಹಾಗೂ ಹೆಬ್ಬೆಟ್ಟಿನ ಗುರುತನ್ನು (Thumb impression) ಸ್ಕ್ಯಾನ್ ಮಾಡಿಟ್ಟುಕೊಂಡಿರಬೇಕು (JPEG/JPG format Max size 50kb). ಈಗ ನೀವು ಒಮ್ಮೆ ಪ್ರೊಫೈಲ್ ಕ್ರಿಯೇಟ್ ಮಾಡಿಟ್ಟುಕೊಂಡಲ್ಲಿ ಮುಂದೆ ಅರ್ಜಿ ಸಲ್ಲಿಸುವಾಗ ಇದೇ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here ) ಮಾಡಿ.
ಹೆಸರು ನೊಂದಾಯಿಸಿಕೊಳ್ಳುವಾಗ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ: 1800-572-8707 ಅಥವಾ ಇ-ಮೇಲ್ ವಿಳಾಸ: kpscsupport@csc.gov.in ಮೂಲಕ ಕೆಪಿಎಸ್‌ಸಿಯನ್ನು ಸಂಪರ್ಕಿಸಿದಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಕೆಪಿಎಸ್‌ಸಿಯು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ : https://kpsc.kar.nic.in
ಇದನ್ನೂ ಓದಿ: KPSC Recruitment 2023 : ಪಿಯುಸಿ ಓದಿದವರಿಗೆ ಕಿರಿಯ ಲೆಕ್ಕ ಸಹಾಯಕರಾಗುವ ಅವಕಾಶ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು