Site icon Vistara News

KPSC Recruitment 2023 | ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಅವಧಿ ಅರ್ಧ ಗಂಟೆ ಹೆಚ್ಚಳ

KPSC Recruitment

ಕೆಪಿಎಸ್‌ಸಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ (KPSC Recruitment 2023 ) ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಅವಧಿಯನ್ನು ಅರ್ಧ ಗಂಟೆ ಹೆಚ್ಚಿಸಲಿದೆ. ಹೀಗಾಗಿ ಇನ್ನು ಮುಂದೆ ಈ ಪರೀಕ್ಷೆಯ ಅವಧಿಯು 2 ಗಂಟೆಗಳಾಗಿರಲಿದೆ.

ಈ ವಿಷಯವನ್ನು ಕೆಪಿಎಸ್‌ಸಿಯ ಕಾರ್ಯರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದ್ದಾರೆ. ಪರೀಕ್ಷೆಯ ಅವಧಿಯನ್ನು ಹೆಚ್ಚಿಸಬೇಕೆಂಬ ಅಭ್ಯರ್ಥಿಗಳ ಬೇಡಿಕೆಯನ್ನು ಮನ್ನಿಸಿ, ಆಯೋಗವು ಈ ತೀರ್ಮಾನ ತೆಗೆದುಕೊಂಡಿದೆ.

ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರ ಉಪನಿಯಮ(7)ರನ್ವಯ ಅರ್ಜಿ ಸಲ್ಲಿಸುವ ಎಲ್ಲಾ, ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಕಡ್ಡಾಯವಾಗಿದ್ದು, ಈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು, ಆಯ್ಕೆಗೆ ಅರ್ಹರಾಗುವುದಿಲ್ಲ.

ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆಪತ್ರಿಕೆಯನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು ಎಸ್‌ಎಸ್‌ಎಲ್‌ಸಿ ಹಂತದಲ್ಲಿನ ಪ್ರಥಮಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗಿರುತ್ತದೆ. ಇದುವರೆಗೆ ಈ ಪರೀಕ್ಷೆ ಬರೆಯಲು ಒಂದೂವರೆ ಗಂಟೆ ಕಾಲಾವಕಾಶ ನೀಡಲಾಗುತ್ತಿತ್ತು. ಇನ್ನು ಮುಂದೆ 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿರುವ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ.

ಇನ್ನು ಮುಂದೆ ಏಕ ಪರೀಕ್ಷೆ

ಈಗಾಗಲೇ ಆಯೋಗವು ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಏಕ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿದೆ. ಒಮ್ಮೆ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ ಇದನ್ನು ಬೇರೆ ನೇಮಕಗಳಲ್ಲಿಯೂ ಪರಿಗಣಿಸಲಾಗುತ್ತದೆ. ಇದರಿಂದ ಅಭ್ಯರ್ಥಿಯು ಪ್ರತಿ ಪರೀಕ್ಷೆಗೂ ಪದೇ ಪದೇ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ ಎಂದು ಆಯೋಗ ಹೇಳಿದೆ.

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲು ಉಂಟಾಗುವ ಸಂಪನ್ಮೂಲದ ತೊಂದರೆ ಮತ್ತು ಅಭ್ಯರ್ಥಿಗಳಿಗೆ ಪ್ರತಿ ಬಾರಿ ಪರೀಕ್ಷೆಯನ್ನು ಬರೆಯುವ ಪರಿಶ್ರಮವನ್ನು ತಪ್ಪಿಸಲು ಹಾಗೂ ಮೌಲ್ಯ ಮಾಪನದಿಂದ ಉಂಟಾಗುವ ವಿಳಂಬವನ್ನು ತಪ್ಪಿಸಲು ಆಯೋಗ ಈ ತೀರ್ಮಾನ ತೆಗೆದುಕೊಂಡಿದೆ.

2001ರ ನಂತರ ಹೊರಡಿಸಲಾಗಿರುವ ಅಧಿಸೂಚನೆಗಳನ್ನು ಒಟ್ಟುಗೂಡಿಸಿ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ಹಾಗೂ ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಅಭ್ಯರ್ಥಿಗಳಿಗೆ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡಲು ಆಯೋಗವು ತೀರ್ಮಾನಿಸಿದೆ.

ಫೆ.25ಕ್ಕೆ ಪರೀಕ್ಷೆ ನಿಗದಿ
ದಿನಾಂಕ: 15-12-2022ರಂದು ಪ್ರಕಟಿಸಲಾಗಿರುವ ವೇಳಾ ಪಟ್ಟಿಯಲ್ಲಿನ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದಿನಾಂಕ 21-01-2023 ಮತ್ತು 22-01-2023ರಂದು ಪರೀಕ್ಷೆ ನಿಗದಿಪಡಿಸಲಾಗಿರುವ ಹುದ್ದೆಗಳಿಗೆ
ನಡೆಸಲಾಗವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಹಾಗೂ ವೇಳಾ ಪಟ್ಟಿಯಲ್ಲಿನ ಎಲ್ಲಾ ಅಧಿಸೂಚನೆಗಳನ್ನು ಒಟ್ಟುಗೂಡಿಸಿ ದಿನಾಂಕ 25-02-2023ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಂದೆ ಆಯೋಗ ನಡೆಸುವ ನೇಮಕ ಪ್ರಕ್ರಿಯೆಯಲ್ಲಿ ಭಾಗಿಯಾದರೆ, ಪುನಃ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕಾಗಿಲ್ಲ.

ಅಭ್ಯರ್ಥಿಗಳು ಒಮ್ಮೆ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶ ಪ್ರಕಟವಾಗದ ಕಾರಣ ಅಥವಾ ಇನ್ನಿತರೆ ಕಾರಣಗಳಿಂದ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯಬೇಕಾದಲ್ಲಿ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಬಹುದಾಗಿರುತ್ತದೆ. ಈ ರೀತಿ ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆ ಬರೆದಲ್ಲಿ ಕೊನೆಯ ಬಾರಿ ಬರೆದ (Recent Most Examination) ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಈಗಾಗಲೇ ಅರ್ಹತೆ ಪಡೆದವರಿಗೆ ಅನ್ವಯವಾಗದು
ಈಗಾಗಲೇ ವಿವಿಧ ನೇಮಕ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯವಾಗದು. ಅವರು ಮತ್ತೊಮ್ಮೆ ಪರೀಕ್ಷೆ ಬರೆದು ಈ ಅರ್ಹತೆಯನ್ನು ಪಡೆಯಬೇಕಾಗಿರುತ್ತದೆ ಎಂದು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Exit mobile version