Site icon Vistara News

KPSC Recruitment 2023 : 76 ಮೋಟಾರು ವಾಹನ ನಿರೀಕ್ಷಕರ ನೇಮಕಕ್ಕೆ ಸದ್ಯವೇ ಕೆಪಿಎಸ್‌ಸಿ ಅಧಿಸೂಚನೆ

KPSC Recruitment

ಕೆಪಿಎಸ್‌ಸಿ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಕ್ಕೆ (KPSC Recruitment 2023) ಸದ್ಯವೇ ಅಧಿಸೂಚನೆ ಹೊರಡಿಸಲಿದೆ. ಈಗಾಗಲೇ ಸಾರಿಗೆ ಇಲಾಖೆಯು ಈ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸಿದ್ದು, ಮೀಸಲಾತಿ ಬದಲಾಗಿರುವುದರಿಂದ ಸದಸ್ಯವೇ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಿದೆ. ಇದು ಸಲ್ಲಿಕೆಯಾಗುತ್ತಿದ್ದಂತೆಯೇ ಕೆಪಿಎಸ್‌ಸಿಯು ಅಧಿಸೂಚನೆ ಹೊರಡಿಸಲಿದೆ.

ಸಾರಿಗೆ ಇಲಾಖೆಗೆ ಕೆಪಿಎಸ್‌ಸಿಯು ಬರೆದ ಪತ್ರ.

ಉಳಿಕೆ ಮೂಲ ವೃಂದದ 70 ಮತ್ತು ಕಲ್ಯಾಣ ಕರ್ನಾಟಕದ 6 ಸೇರಿ ಒಟ್ಟು 76ಹುದ್ದೆಗಳಿಗೆ ನೇಮಕ ನಡೆಸುವಂತೆ ಸಾರಿಗೆ ಇಲಾಖೆಯು ಕಳೆದ ಫೆಬ್ರವರಿಯಲ್ಲಿಯೇ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ನೇರ ಮೀಸಲಾತಿ ಮತ್ತು ಸಮತಳ ಮೀಸಲಾತಿಯ ವರ್ಗೀಕರಣ ತಾಳೆಯಾಗದೇ ಇರುವುದರಿಂದ ಕಳೆದ ಮಾರ್ಚ್‌ನಲ್ಲಿಯೇ ಈ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆಗೆ ವಾಪಾಸ್ ಕಳುಹಿತ್ತು.

ಇತ್ತೀಚೆಗೆ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೊಸ ಮೀಸಲಾತಿ ಪ್ರಕಟಿಸಿರುವುದರಿಂದ ಇದರ ಪ್ರಕಾರ ಈ ಹುದ್ದೆಗಳನ್ನು ಹಂಚಿಕೆ ಮಾಡಿ ಮತ್ತೆ ಪ್ರಸ್ತಾವನೆ ಸಲ್ಲಿಸುವಂತೆ ಆಯೋಗವು ಮೇ 19 ರಂದು ಸಾರಿಗೆ ಇಲಾಖೆಗೆ ಪತ್ರ ಬರೆದಿದೆ. ಇಲಾಖೆಯು ಹೊಸ ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದಂತೆಯೇ ನೇಮಕ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ಏನು ಓದಿರಬೇಕು?

ಆಟೋಮೊಬೈಲ್‌ ಎಂಜಿನಿಯರಿಂಗ್‌ ಅಥವಾ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅಭ್ಯರ್ಥಿಗಳು ಗೇರು ಹೊಂದಿರುವ ಮೋಟಾರು ಸೈಕಲ್‌ ಮತ್ತು ಲಘು ಮೋಟಾರು ವಾಹನಗಳ ಚಾಲನೆ ಪರವಾನಿಗೆ ಹೊಂದಿರಬೇಕಾದದು ಕಡ್ಡಾಯ. ಇದಲ್ಲದೆ, ಪುರುಷ ಅಭ್ಯರ್ಥಿಗಳು 168 ಸೆಂ.ಮೀ. ಎದೆಯ ಸುತ್ತಳತೆ ಹೊಂದಿರಬೇಕು ಮತ್ತು ಎದೆಯ ಸುತ್ತಳತೆಯು ಪೂರ್ತಿ ಉಬ್ಬಿಸಿದಾಗ 86 ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳು 157 ಸೆಂ.ಮೀ ಎತ್ತರ ಇರಬೇಕು ಮತ್ತು 49 ಕೆಜಿ ತೂಕ ಹೊಂದಿರಬೇಕು. ಆಟೋಮೊಬೈಲ್‌ನಲ್ಲಿ ಕನಿಷ್ಠ ಒಂದು ವರ್ಷ ಸೇವೆ ಮಾಡಿದ ಅನುಭವ ಹೊಂದಿರಬೇಕು.

ವೇತನ ಎಷ್ಟಿರುತ್ತದೆ?

ಮೋಟಾರು ವಾಹನ ನಿರೀಕ್ಷಕರ ವೇತನ ಶ್ರೇಣಿ ಹೀಗಿದೆ: 33,450-62,600 ರೂ.

ವಯೋಮಿತಿ ಎಷ್ಟು?

ಸಾಮಾನ್ಯ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷಗಳು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38ವರ್ಷಗಳು. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ನೇಮಕ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 200 ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧ ಪಟ್ಟಿದ್ದರೆ ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯಾಗಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿದೆ. ಈ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದವರು ಮಾತ್ರ ನೇಮಕಕ್ಕೆ ಅರ್ಹರಾಗಿರುತ್ತಾರೆ. ಋಣಾತ್ಮಕ ಮೌಲ್ಯಮಾಪನ (Negative) ನಡೆಸಲಾಗುತ್ತದೆ. ಅಂದರೆ ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು(1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ.

ಈ ನೇಮಕಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಆಯೋಗವು ಅಧಿಸೂಚನೆ ಪ್ರಕಟಿಸುತ್ತಿದ್ದಂತೆಯೇ ʻವಿಸ್ತಾರ ನ್ಯೂಸ್‌ʼ ನಲ್ಲಿ ಒದಗಿಸಲಾಗುತ್ತದೆ. ಹೀಗಾಗಿ ಆಗಾಗ ʻವಿಸ್ತಾರ ನ್ಯೂಸ್‌ʼ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

ಇದನ್ನೂ ಓದಿ : India Post GDS Recruitment 2023 : ಅಂಚೆ ಇಲಾಖೆಯಲ್ಲಿ 12,828 ಹುದ್ದೆ; ಎಸ್ಸೆಸ್ಸೆಲ್ಸಿ ಓದಿದವರಿಗೆ ಅವಕಾಶ

Exit mobile version