ಬೆಳಗಾವಿ: ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್‌ಗಳು ಹಾಗೂ ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕ ಪರೀಕ್ಷೆಯ (KPTCL Exam) ಫಲಿತಾಂಶವನ್ನು ಜನವರಿ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಮತ್ತು ಕೀ ಉತ್ತರಗಳನ್ನು ವಾರದೊಳಗೆ ಪ್ರಕಟಿಸಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಶಾಸಕ ಸುರೇಶ್ ಕುಮಾರ್ ಪ್ರಸ್ತಾಪಿಸಿದ್ದಕ್ಕೆ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪರೀಕ್ಷೆ ಬರೆದು ಐದು ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಕೂಡಲೇ ಕ್ರಮವಹಿಸುವಂತೆ ಸುರೇಶ್ ಕುಮಾರ್ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಪರೀಕ್ಷೆಗಳನ್ನು 5 ತಿಂಗಳ ಹಿಂದೆ ನಡೆಸಲಾಗಿದ್ದು, ಫಲಿತಾಂಶ ಪ್ರಕಟಿಸಲಾಗಿರುವುದಿಲ್ಲ; ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುವುದು ಗಮನಕ್ಕಿದ್ದು, ಈ ಕುರಿತು ಕೆಇಎ ಜತೆಗೆ ಫಾಲೋಅಫ್ ಮಾಡುತ್ತಿದ್ದೇವೆ. ಈ ವಾರದಲ್ಲಿ ಅಥವಾ ಅಧಿವೇಶನ ಮುಗಿಯುವುದರೊಳಗೆ ಕೀ ಉತ್ತರಗಳನ್ನು ಪ್ರಕಟಿಸಿ, ಜನವರಿ ಮೊದಲ ವಾರದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ದೆಹಲಿ ಬ್ರಿಟಿಷರ ರಾಜಧಾನಿ ಆದುದಾದರೂ ಹೇಗೆ?