ಬೆಂಗಳೂರು: ಕೆಪಿಟಿಸಿಎಲ್ ಎಂಜಿನಿಯರ್ ಹುದ್ದೆಗಳಿಗೆ (KPTCL Recruitment) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ನೇಮಕಾತಿ ವಿಳಂಬಕ್ಕೆ ಆಕ್ರೋಶ ಹೊರಹಾಕಿದ್ದ ಉದ್ಯೋಗಾಕಾಂಕ್ಷಿಗಳು, ಹಲವು ಬಾರಿ ಪ್ರತಿಭಟನೆ ನಡೆಸಿ ನೇಮಕಾತಿ ಪ್ರಕ್ರಿಯೆ ಶೀಘ್ರ ಮುಗಿಸುವಂತೆ ಒತ್ತಾಯಿಸಿದ್ದರು. ಇದೀಗ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿನ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಖಾಲಿ ಇರುವ ವಿವಿಧ ಪದವೃಂದದ ಸಹಾಯಕ ಎಂಜಿನಿಯರ್(ವಿದ್ಯುತ್), ಸಹಾಯಕ ಎಂಜಿನಿಯರ್(ಸಿವಿಲ್), ಕಿರಿಯ ಎಂಜಿನಿಯರ್ (ವಿದ್ಯುತ್), ಕಿರಿಯ ಎಂಜಿನಿಯರ್(ಸಿವಿಲ್) ಹಾಗೂ ಕಿರಿಯ ಸಹಾಯಕ ಹುದ್ದೆ ಸೇರಿ ಒಟ್ಟು 1492 ಹುದ್ದೆಗಳ ನೇಮಕಾತಿಗಾಗಿ 2022ರ ಫೆಬ್ರವರಿ 1 ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು.
ಆಯ್ಕೆ ಪಟ್ಟಿ ಪ್ರಕಟಣೆಯ ವೇಳಾಪಟ್ಟಿ
ಸಹಾಯಕ ಎಂಜಿನಿಯರ್ (ಸಿವಿಲ್) ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ ಹಾಗೂ ಕಿರಿಯ ಎಂಜಿನಿಯರ್(ಸಿವಿಲ್) ಹುದ್ದೆಯ ತಾತ್ಕಾಲಿಕ ಅಯ್ಕೆ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯನ್ನು ಜನವರಿ 3 ರಂದು ಪ್ರಕಟಿಸಲಾಗುತ್ತದೆ.
ಎಇ (ವಿದ್ಯುತ್); 2 ವಾರಗಳಲ್ಲಿ ತಾತ್ಕಾಲಿಕ ಪಟ್ಟಿ
ಸಹಾಯಕ ಎಂಜಿನಿಯರ್ (ವಿ) (ASSISTANT ENGINEER (ELEC)) ಹುದ್ದೆಗೆ ಸಂಬಂಧಿಸಿದಂತೆ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ, ಕಲ್ಯಾಣ ಕರ್ನಾಟಕ ಕೋಟಾದ ಅಭ್ಯರ್ಥಿಗಳಿಂದ ಜ. 3 ರಂದು ಹೊಸದಾಗಿ ಇಚ್ಛಿತಾ ಪತ್ರಗಳನ್ನು ಪಡೆಯುವ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇನ್ನು ಎರಡು ವಾರಗಳಲ್ಲಿ ಪ್ರಕಟಿಸಲಾಗುವುದು.
ಸಹಾಯಕ ಎಂಜಿನಿಯರ್(ವಿ) (Assistant Engineer (Elec)) ಹಾಗೂ ಕಿರಿಯ ಎಂಜಿನಿಯರ್(ವಿ) (Junior Engineer (Elec)) ಎರಡೂ ಹುದ್ದೆಗಳಿಗೆ ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಆಯ್ಕೆ ಪಟ್ಟಿಯಲ್ಲಿ ಅರ್ಹತೆ ಪಡೆದಿರುವುದರಿಂದ, ಸಹಾಯಕ ಎಂಜಿನಿಯರ್(ವಿ) ಹುದ್ದೆಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ನಂತರ, ಕಿರಿಯ ಇಂಜಿನಿಯರ್(ವಿ) ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
3 ವಾರಗಳಲ್ಲಿ ಕಿರಿಯ ಸಹಾಯಕರ ತಾತ್ಕಾಲಿಕ ಪಟ್ಟಿ
ಕಿರಿಯ ಸಹಾಯಕ (Junior Assistant) ಹುದ್ದೆಗೆ ಸಂಬಂಧಿಸಿದಂತೆ, ವಿಶೇಷಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆಯನ್ನು ನಡೆಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇನ್ನು ಮೂರು ವಾರಗಳಲ್ಲಿ ಪ್ರಕಟಿಸಲಾಗುವುದು ಎಂದು ಕೆಪಿಟಿಸಿಎಲ್ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆದಿದೆ?
ಕೆಪಿಟಿಸಿಎಲ್ ವಿವಿಧ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯನ್ನು ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಜ್ಯೇಷ್ಠತೆಯ ಆಧಾರದ ಮೇಲೆ ಮಾಡಲಾಗುತ್ತಿದೆ. ಆಪ್ಟಿಟ್ಯೂಡ್ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಆಪ್ಟಿಟ್ಯೂಡ್ ಪರೀಕ್ಷೆಯನ್ನು ಪ್ರಾಧಿಕಾರವು ಪೂರ್ಣಗೊಳಿಸಿ, ಫೆಬ್ರವರಿ-2023ರಲ್ಲಿ ಅರ್ಹ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಪ್ರಕಟಿಸಿತ್ತು. ಈ ಮಧ್ಯೆ, ಕೆಲವು ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಮೀಸಲಾತಿ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊರಡಿಸಲಾದ ಸರ್ಕಾರದ ದಿನಾಂಕ: 01.02.2023ರ ಸುತ್ತೋಲೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಇಂಜಿನಿಯರ್(ವಿ) ಹುದ್ದೆಗೆ ಪ್ರಕಟಿಸಲಾದ ದಿನಾಂಕ: 04.02.2023 ರ ಅಂಕಪಟ್ಟಿಯನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು.
ಇದನ್ನೂ ಓದಿ | Yuva Nidhi Scheme: ಯುವನಿಧಿ ನೋಂದಣಿ ಜೋರು; ನೀವಿನ್ನೂ ಮಾಡಿಲ್ವಾ? ಹಾಗಿದ್ರೆ ಈ ವಿಡಿಯೊ ನೋಡಿ!
ಈ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಸುಮಾರು 8 ತಿಂಗಳಗಳ ಕಾಲ ವಿಳಂಬವಾಗಿದೆ. ಸದರಿ ದಾವೆಗಳನ್ನು ನ್ಯಾಯಾಲಯವು, 2023ರ ಆ.22ರಂದು ಇತ್ಯರ್ಥಗೊಳಿಸಿ, ಕಲ್ಯಾಣ-ಕರ್ನಾಟಕ ಮೀಸಲಾತಿ ಕೋರಿ ಮಿಕ್ಕುಳಿದ ವೃಂದದಲ್ಲಿ ಆಯ್ಕೆಗೆ ಅರ್ಹರಿರುವ ಅಭ್ಯರ್ಥಿಗಳಿಂದ ಅವರು ಸ್ಥಳೀಯ ವೃಂದಕ್ಕೆ ಆಯ್ಕೆಯಾಗಲು ಇಚ್ಚಿಸಿದಲ್ಲಿ, ಅಂತಹ ಅಭ್ಯರ್ಥಿಗಳಿಂದ ಇಚಿತಾ ಪತ್ರವನ್ನು ಪಡೆಯುವಂತೆ ನಿರ್ದೇಶಿಸಿದೆ. ಹಾಗೂ ಸಹಾಯಕ ಎಂಜಿನಿಯರ್(ವಿ) ಹುದ್ದೆಗೆ 2023ರ ಜ. 3 ರಂದು ಪ್ರಕಟಿಸಿದ ಅಂಕಪಟ್ಟಿಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಆದೇಶಿಸಿದೆ. ಸದರಿ ರಿಟ್ ಅರ್ಜಿಗಳು ಇತ್ಯರ್ಥಗೊಂಡ ನಂತರ ನ್ಯಾಯಾಲಯದ ಆದೇಶದನ್ವಯ ಯಾವುದೇ ಕಾಲವಿಳಂಬವಿಲ್ಲದೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲಾಗಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ.