Site icon Vistara News

KSOU Mysuru: ಕೆಎಸ್‌ಒಯುನಿಂದ ಕೆಎಎಸ್‌, ಐಎಎಸ್‌ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

KSOU

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ (KSOU Mysuru) ವತಿಯಿಂದ ಕೆಎಎಸ್‌ ಮತ್ತು ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನವೆಂಬರ್‌ 24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕೆಎಸ್‌ಒಯು ಕುಲ ಸಚಿವ ಪ್ರೊ. ಕೆ.ಎಲ್‌.ಎನ್‌ ಮೂರ್ತಿ ತಿಳಿಸಿದ್ದಾರೆ.

50 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ತರಬೇತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0821- 2515944 ಅನ್ನು ಸಂಪರ್ಕಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Job Alert: ಸೆಂಟ್ರಲ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ನಾಳೆಯೇ ಕಡೆಯ ದಿನ

ಮೈಸೂರಿನಲ್ಲಿ ನ. 19ರಂದು ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ

ಮೈಸೂರು: ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ನವೆಂಬರ್‌ 19ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ʼಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳʼ (Job Fair) ವನ್ನು ನಗರದ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌ನ ಇನ್ಫೋಸಿಸ್‌ ಸಂಸ್ಥೆ ಹತ್ತಿರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನ ಆವರಣದ ಬಿಜಿಎಸ್‌ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನ ಸ್ಥಾಪಕ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ನಂಜೇಗೌಡ ನಂಜುಂಡ ಅವರು ಮಾಹಿತಿ ನೀಡಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪ್ರಣವ ಸ್ವರೂಪಿ, ಶ್ರೀಮನ್ನಿರಂಜನ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮೈಸೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗೌರವ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌ ಅವರು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | Job Alert: ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯದಲ್ಲಿ 487 ಹುದ್ದೆಗಳಿವೆ!

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (RERA) ಅಧ್ಯಕ್ಷ, ನಿವೃತ್ತ ಐಪಿಎಸ್‌ ಅಧಿಕಾರಿ ಎಚ್. ಸಿ. ಕಿಶೋರ್ ಚಂದ್ರ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಾಜಿ ಮಾಜಿ ನಿರ್ದೇಶಕ ಡಾ. ಸಿ. ರಾಮಚಂದ್ರ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮುಖ್ಯ ಸಲಹೆಗಾರ ಅಭಿಜಿತ್‌, ಗೌರವ ಅತಿಥಿಗಳಾಗಿ ವಿಜಯವಾಣಿ ಮುಖ್ಯ ಸಂಪಾದಕ ಚನ್ನೇಗೌಡ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಐಎಎಸ್‌ ಅಧಿಕಾರಿಗಳಾದ ಪ್ರದೀಪ್ ಪ್ರಭಾಕರ್‌,
ಮಂಜುಶ್ರೀ. ಎನ್, ಎಸ್.ಎನ್. ಬಾಲಚಂದ್ರ, ಐಪಿಎಸ್‌ ಅಧಿಕಾರಿಗಳಾದ ಯತೀಶ್. ಎನ್, ಎಂ.ಮುತ್ತುರಾಜ್, ಪೃಥ್ವಿಕ್ ಶಂಕರ್‌ ಅವರು ಹಾಜರಾಗಲಿದ್ದಾರೆ ಎಂದು ಹೇಳಿದ್ದಾರೆ.

ರೈತ ಕುಟುಂಬಗಳ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಪ್ರತಿ ಅಭ್ಯರ್ಥಿಯೂ 5 ಸಂಸ್ಥೆಗಳ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಪ್ರಭೋದಿತ, ಮಹೀಂದ್ರಾ ಫೈನಾನ್ಸ್, ರಿಲಯನ್ಸ್‌ ಮಾರ್ಟ್‌, ಮ್ಯಾನ್‌ಪವರ್‌ ಗ್ರೂಪ್‌ ಸೇರಿ 50ಕ್ಕೂ ಕಂಪನಿಗಳು ಭಾಗವಹಿಸಲಿದ್ದು, 5000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ. ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ‌ ಮೋಹನ್: 9686564192, ರವಿಚಂದ್ರ: 9886943810, ಕಿರಣಕುಮಾರ್: 8660569173 ಸಂಪರ್ಕಿಸಿ.‌

ವಿದ್ಯಾರ್ಹತೆ

ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ (ಪಾಸ್‌/ಫೇಲ್‌), ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ಎನ್‌ಟಿಟಿ, ಟಿಸಿಎಚ್‌, ಬಿ.ಇಡಿ, ಎಂ.ಇಡಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ | SBI Recruitment 2023 : 8,283 ಹುದ್ದೆಗಳಿಗೆ ನೇಮಕ; ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು!

ಉದ್ಯೋಗಾವಕಾಶ

ಹೌಸ್‌ ಕೀಪಿಂಗ್‌, ಸೇಲ್ಸ್‌ ಬಾಯ್‌, ಆಫೀಸ್‌ ಅಸಿಸ್ಟೆಂಟ್‌, ಚಾಲಕರು, ಡೆಲಿವರಿ ಬಾಯ್‌, ಸೆಕ್ಯೂರಿಟಿ ಸರ್ವೀಸಸ್‌, ಡಿಟಿಪಿ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಟೀಚಿಂಗ್‌, ಟ್ರೈನಿಂಗ್‌, ಕಲೆಕ್ಷನ್‌, ಕೌಂಟರ್‌ ಸೇಲ್ಸ್‌, ಮಾರ್ಕೆಟಿಂಗ್‌, ಟೆಲಿ ಮಾರ್ಕೆಟಿಂಗ್‌, ಇನ್ಶೂರೆನ್ಸ್‌, ಬ್ಯಾಂಕಿಂಗ್‌, ಆಡಳಿತ, ಬಿಪಿಒ, ಕೆಪಿಒ ಮತ್ತು ಎಂಟಿ ಇತ್ಯಾದಿ ಉದ್ಯೋಗಾವಕಾಶಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version