ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ (KSP Recruitment 2022) ಉದ್ಯೋಗ ಪಡೆಯಬೇಕೆಂದು ಕನಸು ಹೊತ್ತವರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಈಗಾಗಲೇ ಅರ್ಜಿ ಆಹ್ವಾನಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು 2 ವರ್ಷ ಹೆಚ್ಚಿಸಲಾಗಿದೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಸರಿಯಾಗಿ ನೇಮಕಾತಿ ನಡೆಯದೇ ಇದ್ದುದ್ದರಿಂದ ವಯೋಮಿತಿಯನ್ನು ಹೆಚ್ಚಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದರು. ಅವರ ಒತ್ತಡಕ್ಕೆ ಕೊನೆಗೂ ಮಣಿದ ರಾಜ್ಯ ಸರ್ಕಾರ ಈ ಸಂಬಂಧ ತೀರ್ಮಾನ ತೆಗೆದುಕೊಂಡಿದ್ದು, ಬುಧವಾರ ತಿದ್ದುಪಡಿ ಅಧಿಸೂಚನೆ ಪ್ರಕಟಿಸಿದೆ.
ಈಗಗಲೇ ನಡೆಯುತ್ತಿರುವ 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ 1, 591 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಈ ವಯೋಮಿತಿ ಹೆಚ್ಚಳವು ಅನ್ವಯವಾಗಲಿದೆ. ವಯೋಮಿತಿ ಹೆಚ್ಚಳ ಮಾಡುವ ಕುರಿತು “ವಿಸ್ತಾರ ನ್ಯೂಸ್ʼʼ ಈ ಹಿಂದೆಯೇ ಸುಳಿವು ನೀಡಿತ್ತು.
ಅರ್ಜಿ ಸಲ್ಲಿಸಲು ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ| https://apc3064.ksp-recruitment.in
ಇದುವರೆಗೆ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಎಂದು ಹೇಳಲಾಗಿತ್ತು. ಅದನ್ನು ಈಗ ಒಂದು ವರ್ಷ ಹೆಚ್ಚಿಸಲಾಗಿದ್ದು, ಈಗ ಕನಿಷ್ಠ 19 ವರ್ಷ ಆಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಈ ಹಿಂದೆ ತಿಳಿಸಿದಂತೆ ಕನಿಷ್ಠ ವಯಸ್ಸು 18 ವರ್ಷವೇ ನಿಗದಿಯಾಗಿದೆ.
ಇದುವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ ಇತ್ತು. ಇದನ್ನು ಈಗ 29 ವರ್ಷ ಎಂದು ನಿಗದಿಪಡಿಸಲಾಗಿದೆ. ಇತರೆ ಅಭ್ಯರ್ಥಿಗಳಿಗೆ 25 ವರ್ಷ ಗರಿಷ್ಠ ವಯೋಮಿತಿ ಇದ್ದಿದ್ದನ್ನು 27 ವರ್ಷಗಳಿಗೆ ಏರಿಸಲಾಗಿದೆ. ಬುಡುಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿತ್ತು. ಅದನ್ನು 32 ವರ್ಷಗಳಿಗೆ ಏರಿಸಲಾಗಿದೆ.
ಸೇವಾನಿರತ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 33 ವರ್ಷ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷ ನಿಗದಿಪಡಿಸಲಾಗಿದೆ.
3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನವೆಂಬರ್ ೩೦ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಡಿಸೆಂಬರ್ 2ರ ವರೆಗೆ ಕಾಲಾವಕಾಶ ನೀಡಲಾಗಿದೆ. 1,591 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನವೆಂಬರ್ 21ರ ವರೆಗೆ ಅವಕಾಶ ನೀಡಲಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ನವೆಂಬರ್ 23 ಕೊನೆಯ ದಿನವಾಗಿದೆ.
1, 591 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ದಿನಾಂಕ 21-11-2022 ಕ್ಕೆ ವಯೋಮಿತಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ದಿನಾಂಕ 31-10-2022 ಕ್ಕೆ ವಯೋಮಿತಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ವಯೋಮಿತಿ ಹೆಚ್ಚಳವನ್ನು ಹೊರತು ಪಡಿಸಿ ಈ ನೇಮಕ ಪ್ರಕ್ರಿಯೆಯಲ್ಲಿ ಬೇರೆ ಯಾವ ಬದಲಾವಣೆಗಳನ್ನೂ ಮಾಡಲಾಗಿಲ್ಲ ಎಂದು ತಿದ್ದುಪಡಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್: https://ksp.karnataka.gov.in
ಇದನ್ನೂ ಓದಿ | KSP Recruitment 2022 | 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಈ 15 ವಿಷಯ ಗಮನಿಸಿ