ರಾಜ್ಯ ಪೊಲೀಸ್ ಇಲಾಖೆಯು ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು (KSP Recruitment 2022) ಆರಂಭಿಸಿದ್ದು, ಅಧಿಸೂಚನೆ ಪ್ರಕಟಿಸಿದೆ. ಒಟ್ಟು 3,484 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇದರಲ್ಲಿ 420 ಹುದ್ದೆಗಳನ್ನು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ (ಹೈಕ) ಮೀಸಲಿಡಲಾಗಿದೆ. ಸರ್ಕಾರದ ತೀರ್ಮಾನದಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಅಧಿಸೂಚನೆ ಪ್ರಕಟಿಸಲಾಗಿದೆ.
ಪುರುಷ ಮತ್ತು ಪುರುಷ ತೃತೀಯ ಲಿಂಗ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈಗ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈಗ ಅಧಿಸೂಚನೆ ಪ್ರಕಟವಾಗಿದ್ದರೂ ಸೆಪ್ಟೆಂಬರ್ 19 ರಂದು ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಂಚೆಯ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳ/ ಸ್ಥಳೀಯ ಅಂಚೆಕಚೇರಿಗಳ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದ್ದು, ನವೆಂಬರ್ 03 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿರುತ್ತದೆ.
ಉಳಿಕೆ ವೃಂದದ ಒಟ್ಟು 3,064 ಹುದ್ದೆಗಳ ಪೈಕಿ 68 ಹುದ್ದೆಗಳನ್ನು ಪುರುಷ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಒಟ್ಟಾರೆ ಬೆಂಗಳೂರು ನಗರದಲ್ಲಿಯೇ 1,178 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಉಳಿದ ಹುದ್ದೆಗಳನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
ವಿದ್ಯಾರ್ಹತೆ ಏನು?
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತತ್ಸಮಾನ ವಿದ್ಯಾರ್ಹತೆ ಎಂದರೆ;
೧. ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಮಂಡಳಿಯು ನಡೆಸು 10ನೇ ತರಗತಿ ಪರೀಕ್ಷೆ.
೨. ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 10ನೇತ ತರಗತಿ ಪರೀಕ್ಷೆ.
೩. ನ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಎನ್.ಐ.ಓ.ಎಸ್) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಕೋರ್ಸ್/ಹೆಚ್.ಎಸ್.ಸಿ.
೪. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ (ಕೆಒಎಸ್)
ದೈಹಿಕ ಅರ್ಹತೆ ಏನು?
ಎಲ್ಲ ಸಾಮಾನ್ಯ ಪುರಷ ಮತ್ತು ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಕನಿಷ್ಠ 168 ಸೆ.ಮೀ. ಎತ್ತರವಿರಬೇಕು. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ. (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5 ಸೆಂ.ಮೀ. ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳು ಕನಿಷ್ಠ 155 ಸೆಂ.ಮೀ ಎತ್ತರವಿರಬೇಕು ಮತ್ತು 5 ಸೆಂ.ಮೀ. ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತಿರಬೇಕು.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷ, ಇತರೆ ಅಭ್ಯರ್ಥಿಗಳಿಗೆ 25 ವರ್ಷ ಹಾಗೂ ಬುಡುಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 19-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-10-2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03-11-2022
ಸಹಾಯವಾಣಿ ಸಂಖ್ಯೆ: 080-22943346 & 080-22943039
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್: https://ksp-recruitment.in
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 400ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 200ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮುಖಾಂತರ ಪಾವತಿಸಬಹುದು ಅಥವಾ ಚಲನ್ ಡೌನ್‌ಲೋಡ್ ಮಾಡಿಕೊಂಡು ಕೆನರಾಬ್ಯಾಂಕ್ ಅಥವಾ ಸ್ಥಳೀಯ ಇ-ಅಂಚೆಕಚೇರಿಗಳಲ್ಲಿ ಪಾವತಿಸಬಹುದಾಗಿರುತ್ತದೆ. ಅರ್ಜಿ ಶುಲ್ಕದೊಂದಿಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕಿರುತ್ತದೆ.
ವೇತನ ಶ್ರೇಣಿ ಹೇಗಿರುತ್ತದೆ?
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ವೇತನ ಶ್ರೇಣಿ ಇಂತಿದೆ. ರೂ. 23,500-550-24,600-600-27,000-650-29,600-750-32,600-850-36,000-950-39,800-1,100-46,400- 1,250-47,650.
ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ವಸ್ತುನಿಷ್ಟ (ಅಬ್ಜೆಕ್ಟೀವ್) ಮಾದರಿಯಲ್ಲಿ ಈ ಲಿಖಿತ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ (1:5 ಅನುಪಾತದಲ್ಲಿ) ದೇಹದಾರ್ಢ್ಯತೆ ಪರೀಕ್ಷೆ (Physical Standard Test) ಮತ್ತು ಸಹಿಷ್ಣುತೆ ಪರೀಕ್ಷೆ (Endurance Test) ನಡೆಸಲಾಗುತ್ತದೆ. ಮೊದಲಿಗೆ ನಡೆಸಲಾಗುವ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಸಹಿಷ್ಣುತೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.
ದೇಹದಾರ್ಢ್ಯತೆ ಪರೀಕ್ಷೆ (Physical Standard Test) ಮತ್ತು ಸಹಿಷ್ಣುತೆ ಪರೀಕ್ಷೆ (Endurance Test) ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಇದರಲ್ಲಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ | KPSC Recruitment 2022 | ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ