Site icon Vistara News

KSP Recruitment 2022 | ಅರ್ಜಿ ಸಲ್ಲಿಕೆ ಅವಧಿ ಒಂದು ತಿಂಗಳು ವಿಸ್ತರಣೆ; ವಯೋಮಿತಿ ಹೆಚ್ಚಳವಾಗುತ್ತಾ?

KSP Recruitment 2022

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯು ಒಟ್ಟು 3,484 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿ (KSP Recruitment 2022), ಅರ್ಜಿ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿದೆ. ಇದರಿಂದಾಗಿ ಅರ್ಜಿ ಸಲ್ಲಿಸಲು ಸುಮಾರು 70 ದಿನ ಕಾಲಾವಕಾಶ ನೀಡಿದಂತಾಗಿದೆ!

ಇಲಾಖೆಯ ಈ ಕ್ರಮ ತೀವ್ರ ಚರ್ಚೆಗೆ ಕಾರಣವಾಗಿದೆ. ಸೆ.12 ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಸೆ.19 ರಿಂದ ಅಕ್ಟೋಬರ್‌ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಅಂತೆಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು. ಈಗ ತಿದ್ದುಪಡಿ ಅಧಿಸೂಚನೆ ಪ್ರಕಟಿಸಿರುವ ಇಲಾಖೆಯು ನವೆಂಬರ್‌ ೩೦ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಅರ್ಜಿ ಶುಲ್ಕ ಪಾವತಿಸಲು ಡಿಸೆಂಬರ್‌ 2ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಇಲಾಖೆಯು ಹಿಂದೆಂದೂ ಅರ್ಜಿ ಸಲ್ಲಿಸಲು ಇಷ್ಟೊಂದು ಸಮಯ ನೀಡಿರಲಿಲ್ಲ. ಈಗಿನ ಕ್ರಮ ಅಭ್ಯರ್ಥಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಬಹುಶಃ ಇಲಾಖೆಯು ಅಭ್ಯರ್ಥಿಗಳ ವಯೋಮಿತಿಯನ್ನು ಹೆಚ್ಚಿಸಲು ಉದ್ದೇಶಿಸಿದ್ದು, ಈ ಕಾರಣಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯ ನೀಡಿರಬಹುದು, ವಯೋಮಿತಿ ಹೆಚ್ಚಿಸುವ ಕುರಿತು ಸದ್ಯವೇ ಪ್ರಕಟಣೆ ನೀಡಬಹುದು ಎಂದು ಕೆಲ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಇಲಾಖೆಯ ಇತ್ತೀಚಿನ ನೇಮಕದಲ್ಲಿ ಅಕ್ರಮಗಳು ನಡೆದಿರುವುದು ಬಹಿರಂಗವಾಗಿರುವುದರಿಂದ ಅಭ್ಯರ್ಥಿಗಳಿಗೆ ಇಲಾಖೆಯ ಬಗ್ಗೆ ಜಿಗುಪ್ಸೆ ಮೂಡಿದೆ. ಹೀಗಾಗಿ ನಿರೀಕ್ಷಿಸಿದಷ್ಟು ಅಭ್ಯರ್ಥಿಗಳು ಈ ಬಾರಿ ಅರ್ಜಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆಯು ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಿಸಿರಬಹುದು ಎಂದು ಇನ್ನು ಕೆಲವರು ಅಂದಾಜಿಸಿದ್ದಾರೆ.

ಆದರೆ ಪೊಲೀಸ್‌ ಇಲಾಖೆಯು ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. “ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಿಸಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲʼʼ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್‌ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಂಚೆಯ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಬ್ಯಾಂಕ್‌ ಶಾಖೆಗಳ/ ಸ್ಥಳೀಯ ಅಂಚೆಕಚೇರಿಗಳ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದ್ದು, ನವೆಂಬರ್‌ 03 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿರುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್‌ಗೆ ಇಲ್ಲಿ ಕ್ಲಿಕ್‌ ಮಾಡಿ| https://apc3064.ksp-recruitment.in/

ಒಟ್ಟು 3,484 ಹುದ್ದೆಗಳಲ್ಲಿ 420 ಹುದ್ದೆಗಳನ್ನು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ (ಹೈಕ) ಮೀಸಲಿಡಲಾಗಿದೆ. ಪುರುಷ ಮತ್ತು ಪುರುಷ ತೃತೀಯ ಲಿಂಗ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-11-.2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 02-12-2022
ಸಹಾಯವಾಣಿ ಸಂಖ್ಯೆ: 080-22943346 & 080-22943039
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌: https://ksp-recruitment.in

ವಿದ್ಯಾರ್ಹತೆ ಏನು?
ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತತ್ಸಮಾನ ವಿದ್ಯಾರ್ಹತೆ ಎಂದರೆ;
೧. ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಮಂಡಳಿಯು ನಡೆಸು 10ನೇ ತರಗತಿ ಪರೀಕ್ಷೆ.
೨. ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ 10ನೇತ ತರಗತಿ ಪರೀಕ್ಷೆ.
೩. ನ್ಯಾಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್ ಸ್ಕೂಲಿಂಗ್‌(ಎನ್.ಐ.ಓ.ಎಸ್) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಕೋರ್ಸ್/ಹೆಚ್.ಎಸ್.ಸಿ.
೪. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್‌ (ಕೆಒಎಸ್‌)

ದೈಹಿಕ ಅರ್ಹತೆ ಏನು?
ಎಲ್ಲ ಸಾಮಾನ್ಯ ಪುರಷ ಮತ್ತು ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಕನಿಷ್ಠ 168 ಸೆ.ಮೀ. ಎತ್ತರವಿರಬೇಕು. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ. (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5 ಸೆಂ.ಮೀ. ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳು ಕನಿಷ್ಠ 155 ಸೆಂ.ಮೀ ಎತ್ತರವಿರಬೇಕು ಮತ್ತು 5 ಸೆಂ.ಮೀ. ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತಿರಬೇಕು.

ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷ, ಇತರೆ ಅಭ್ಯರ್ಥಿಗಳಿಗೆ 25 ವರ್ಷ ಹಾಗೂ ಬುಡುಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 400ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 200ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮುಖಾಂತರ ಪಾವತಿಸಬಹುದು ಅಥವಾ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಕೆನರಾಬ್ಯಾಂಕ್‌ ಅಥವಾ ಸ್ಥಳೀಯ ಇ-ಅಂಚೆಕಚೇರಿಗಳಲ್ಲಿ ಪಾವತಿಸಬಹುದಾಗಿರುತ್ತದೆ. ಅರ್ಜಿ ಶುಲ್ಕದೊಂದಿಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕಿರುತ್ತದೆ.

ಇದನ್ನೂ ಓದಿ | KPSC Recruitment 2022 | ಸಾಂಖ್ಯಿಕ ನಿರೀಕ್ಷಕರ 105 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ

Exit mobile version