ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯು ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ (KSP Recruitment 2022) ಡಿಸೆಂಬರ್ 18 ರಂದು ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಿದೆ.
ಒಟ್ಟು 70 ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದ್ದು, ಕಳೆದ ಡಿಸೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ ಸಹಿಷ್ಣುತೆ ಮತ್ತು ದೈಹಿಕ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಡಿಸೆಂಬರ್ 18 ರ ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2 ರಿಂದ 3.30ರ ವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರಿನಲ್ಲಿ ಈ ಪರೀಕ್ಷೆ ನಡೆಸಲು ಇಲಾಖೆಯು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸರಿಸುಮಾರು ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುವ ನಿರೀಕ್ಷೆ ಇದೆ. ಪರೀಕ್ಷಾ ಕೇಂದ್ರಗಳ ಮಾಹಿತಿ ಪಡೆದುಕೊಂಡಿರುವ ಇಲಾಖೆಯು ಸದ್ಯವೇ ಅಧಿಕೃತವಾಗಿ ಪರೀಕ್ಷಾ ದಿನಾಂಕ ಪ್ರಕಟಿಸಲಿದೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಇಲಾಖೆಯು ವೆಬ್‌ಸೈಟ್‌ನಲ್ಲಿ ಒದಗಿಸಲಿದ್ದು, ಇದನ್ನು ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆಯೊಂದನ್ನು ಆಯೋಜಿಸುತ್ತಿದ್ದು, ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಹೆಚ್ಚಿನ ಮಾಹಿತಿಗೆ ನೀವು ನೋಡುತ್ತಿರಬೇಕಾದ ವೆಬ್‌ಸೈಟ್ ವಿಳಾಸ ಇಂತಿದೆ: https://arc21.ksp-recruitment.in/
ಇದನ್ನೂ ಓದಿ | KSP Recruitment 2022 | ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ; ಕೊನೆಗೂ ಗರಿಷ್ಠ ವಯೋಮಿತಿ 2 ವರ್ಷ ಹೆಚ್ಚಳ