ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ (KSP Recruitment) ನೇಮಕಕ್ಕೆ ಜುಲೈ 9 ಅಥವಾ 16 ಅಥವಾ 23 ರಂದು ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.
ಕಳೆದ ಮಾರ್ಚ್‌ನಲ್ಲಿಯೇ ಪೊಲೀಸ್ ಮಹಾ ನಿರ್ದೇಶಕರು ಟ್ವಿಟ್ಟರ್‌ನಲ್ಲಿ ಜುಲೈನಲ್ಲಿ ಈ ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದೆ. ಒಟ್ಟು 75 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುವ ಸಾಧ್ಯತೆಗಳಿದ್ದು, 800 ಮಂದಿ ಕುಳಿತು ಪರೀಕ್ಷೆ ಬರೆಯಬಹುದಾದಂತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲು ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರತಿ ವಿಭಾಗದಲ್ಲಿಯೂ 8000 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ.
2022ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಪೊಲೀಸ್ ಕಾನ್ಸ್‌ಟೇಬಲ್ ನೇಮಕ ಪ್ರಕ್ರಿಯೆಯಲ್ಲಿ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಈ ಎರಡೂ ಪರೀಕ್ಷೆ ನಡೆದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಆದರೆ ಅಧಿಸೂಚನೆ ಪ್ರಕಟವಾಗಿ ಎಂಟು ತಿಂಗಳು ಕಳೆದರೂ ಮೊದಲಿಗೆ ನಡೆಯಬೇಕಾಗಿದ್ದ ಲಿಖಿತ ನಡೆಸಲಾಗಿರಲಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ಇಲಾಖೆ ನೀಡುತ್ತಿರಲಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿರಾಸೆ ಅನುಭವಿಸುತ್ತಿದ್ದರು. ಕಳೆದ ಮಾರ್ಚ್‌ನಲ್ಲಿ ಟ್ವಿಟ್ಟರ್‌ನಲ್ಲಿ ಅಭ್ಯರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಆಗಿನ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಇಲಾಖೆಯಲ್ಲಿನ 1,591 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಹಾಗೂ 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ನಂತರ ಅಂದರೆ ಮುಂದಿನ ಜುಲೈನಲ್ಲಿ ಲಿಖಿತ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಬಹುತೇಕವಾಗಿ ಜುಲೈ 2, 9, 16 ಮತ್ತು 23 ರಂದು ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದರು. ಇದನ್ನು ಬಿಟ್ಟರೆ ಇಲಾಖೆಯ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿರಲಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದರಿಂದ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೇ ಈ ಹಗರಣದಲ್ಲಿ ಭಾಗಿಯಾಗಿದ್ದರಿಂದ ಪೊಲೀಸ್ ಇಲಾಖೆಯ ನೇಮಕ ಪ್ರಕ್ರಿಯೆಯ ಮೇಲೆ ಕಾರ್ಮೋಡ ಕವಿದಿದೆ. ಹೀಗಾಗಿ ಪೊಲೀಸ್ ಇಲಾಖೆ ಸೇರಬೇಕೆಂದು ಕನಸು ಹೊತ್ತಿದ್ದ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ಈಗ ದಿಕ್ಕುಕಾಣದಂತಾಗಿದ್ದಾರೆ. ಈ ಹೊತ್ತಿನಲ್ಲಿ ಈ ನೇಮಕಾತಿ ಪರೀಕ್ಷೆ ನಡೆಯಲಿದೆ ಎಂಬ ಸುದ್ದಿ ಇಲಾಖೆಯಿಂದ ಹೊರ ಬಿದ್ದಿರುವುದು ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಮಾಹಿತಿಗಾಗಿ ನೋಡುತ್ತಿರಬೇಕಾದ ವೆಬ್ ವಿಳಾಸ: https://apc3064.ksp-recruitment.in/index
ಈ ನಡುವೆ ನೂತನ ಗೃಹ ಸಚಿವ ಡಾ.ಜಿ. ಪರಮೇಶ್ವರ್ 15 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ತುಮಕೂರಿನಲ್ಲಿ ಇತ್ತೀಚೆಗೆ ತಿಳಿಸಿರುವುದರಿಂದ ಪೊಲೀಸ್ ಇಲಾಖೆಯಲ್ಲಿ ಮತ್ತೆ ನೇಮಕ ಪ್ರಕ್ರಿಯೆ ಒಂದರ ಹಿಂದೊಂದರಂತೆ ನಡೆಯುವುದರ ಸುಳಿವು ನೀಡಿದೆ.
ಇದನ್ನೂ ಓದಿ : Court Recruitment 2023 : ಮೈಸೂರು ಕೋರ್ಟ್‌ನಲ್ಲಿ ಕಾಯಂ ಹುದ್ದೆ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು