ಬೀದರ್ : ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಈ ಬಾರಿಯ ಪರೀಕ್ಷೆಯಲ್ಲಿ 569ನೇ ರ‍್ಯಾಂಕ್ ಪಡೆದು, ಐಪಿಎಸ್ ಸೇವೆಗೆ ಸೇರ್ಪಡೆಯಾಗಿರುವ ಕೆಎಸ್ಆರ್ಟಿಸಿ ಬಸ್ ಚಾಲಕರಾದ ಮಾಣಿಕ್ ರಾವ್ ರವರ ಪುತ್ರ ಅನುರಾಗ್ ಅವರನ್ನು ಕೆಎಸ್ಆರ್ಟಿಸಿಯ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ, ಶಾಸಕ ಎಂ.ಚಂದ್ರಪ್ಪ “ನಮ್ಮ ಚಾಲನಾ ಸಿಬ್ಬಂದಿಗಳು ಹಗಲಿರುಳು ಬಸ್ಸುಗಳನ್ನು ಚಾಲನೆ ಮಾಡುತ್ತಾ, ಕಷ್ಟಪಟ್ಟು ದುಡಿಯುತ್ತಿರುತ್ತಾರೆ. ಅವರು ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡುವಲ್ಲಿ ಸಫಲರಾಗಿರುವುದ ನಿಜಕ್ಕೂ ಶ್ಲಾಘನೀಯ ಹಾಗೂ ಮಾದರಿಯಾದದ್ದುʼʼ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿಯಾಗಲಿರುವ ಅನುರಾಗ್ ಅವರ ಪೋಷಕರಾದ ಮಾಣಿಕ್ ರಾವ್ ಮತ್ತು ಕಾಶಿಬಾಯಿ ಅವರನ್ನು ನಾನು ಅಭಿನಂಧಿಸತ್ತೇನೆ. ಅನುರಾಗ್ ರವರು ತಮ್ಮ ಸೇವಾ ಅವಧಿಯಲ್ಲಿ ನಾಡಿನ ಪ್ರತಿಯೊಬ್ಬ ಪ್ರಜೆಯ ಅದರಲ್ಲೂ ನೊಂದವರ ಕೂಗಿಗೆ ಧ್ವನಿಯಾಗಬೇಕು ಎಂದು ಆಶಿಸುತ್ತೇನೆ ಎಂದು ಶಾಸಕರು ಹೇಳಿದ್ದಾರೆ.
ಇದನ್ನು ಓದಿ | ಬಸ್ ಹತ್ತಿದ ಪ್ರಯಾಣಿಕರಿಗೆ ಈ ಕಂಡಕ್ಟರ್ ಮೊದಲು ಕೊಡೋದು ಏನನ್ನ? ನೆಟ್ಟಿಗರ ಮನ ಗೆದ್ದವರಿವರು!
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾತನಾಡಿ, ” ಐಎಎಸ್ ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸ್ಸಾಗಿದ್ದರೂ ಅದು ಒಂದು ತಪಸ್ಸು. ಸತತ ಪರಿಶ್ರಮ, ಶ್ರದ್ಧೆಯ ಮೂಲಕ ನಿರಂತರ, ನಿಯಮ ಬದ್ಧ ಕಲಿಕೆಯಿಂದ ಮಾತ್ರ ಈ ಸಾಧನೆ ಮಾಡಲು ಸಾಧ್ಯ. ಈ ಸಾಧನೆಯನ್ನ ನಮ್ಮ ಚಾಲಕರ ಮಗ ಮಾಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ಹಾಗೂ ಗೌರವವಾಗಿದೆʼʼ ಎಂದರು
“ನೀವು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ನಿರ್ವಹಿಸಿʼʼ ಎಂದು ಅನುರಾಗ್ ಅವರಿಗೆ ಶುಭ ಹಾರೈಸಿದ ಅನ್ಬುಕುಮಾರ್, ನಿಮ್ಮ ಈ ಸಾಧನೆಯಲ್ಲಿ ನಿಮ್ಮ ತಂದೆ ತಾಯಿಯ ಪಾತ್ರ ಬಹಳ ಹಿರಿದು. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಮ್ಮ ಸಂಸ್ಥೆಯ ಬಹಳಷ್ಟು ಚಾಲಕ ನಿರ್ವಾಹಕ ಹಾಗೂ ಮೆಕ್ಯಾನಿಕ್ ಗಳ ಮಕ್ಕಳು ಎಂಜಿನಿಯರಿಂಗ್, ಮೆಡಿಕಲ್, ಐಐಟಿ, ಐಐಎಂ, ನೇವಿ ಮತ್ತಿತರೆಡೆ ಕೆಲಸ ಮಾಡುತ್ತಿದ್ದಾರೆ ಎಂಬುದು ಅತ್ಯಂತ ಸಂತೋಷ ಹಾಗೂ ಅಭಿಮಾನದ ವಿಷಯ. ಇದು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಡಾ.ನವೀನ್ ಭಟ್ ವೈ, ಚಾಲಕರಾದ ಮಾಣಿಕ್ ರಾವ್ ಮತ್ತು ಕಾಶಿಬಾಯಿ, ಅನುರಾಗ್ ಸಂಬಂಧಿಕರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | UPSC Results 2021: ಶ್ರದ್ಧೆಯಿಂದ ಓದಿ, ಅಜ್ಜನಂತೆ ಅಧಿಕಾರಿಯಾಗುವ ಕನಸು ನನಗಾಗಿಸಿದ ಲಕ್ಕುಂಡಿಯ ಯುವಕ