Site icon Vistara News

Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

Labor Day-2024

ಬದುಕಿನ ಬಹುಪಾಲು ದಿನಗಳನ್ನು ದುಡಿಮೆಯಲ್ಲೇ ಕಳೆಯುವವರು ಕಾರ್ಮಿಕರು (Labour Day 2024). ಇವರಲ್ಲಿ ಕೆಲವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಹೀಗಾಗಿ ಅವರ ಬದುಕು ನಿತ್ಯವೂ ಹೋರಾಟದಲ್ಲೇ ಕಳೆಯುತ್ತದೆ. ನಿತ್ಯದ ಕೆಲಸದ ಕೂಲಿಗಾಗಿ ಯಾವುದೇ ವಿಶೇಷ ಸವಲತ್ತುಗಳಿಲ್ಲದೆ ಹಗಲು, ರಾತ್ರಿ ಎನ್ನದೆ ದುಡಿಯುವ ಜೀವಗಳು ಲಕ್ಷಾಂತರ. ಇವರ ಹೋರಾಟ, ತ್ಯಾಗಗಳನ್ನು ಸ್ಮರಿಸಲು ಪ್ರತಿ ವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು (International Labour Day-2024) ಆಚರಿಸಲಾಗುತ್ತದೆ. ಇದನ್ನು ಮೇ ದಿನ (may day) ಎಂದೂ ಕರೆಯಲಾಗುತ್ತದೆ.

ಕಾರ್ಮಿಕರ ದಿನಾಚರಣೆಯ ಮೂಲ 19ನೇ ಶತಮಾನದ ಉತ್ತರಾರ್ಧ ಎಂದು ಹೇಳಬಹುದು. ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕಾರ್ಮಿಕರು ಉತ್ತಮ ಕೆಲಸದ ಪರಿಸ್ಥಿತಿಗಳು, ನ್ಯಾಯಯುತ ವೇತನ ಮತ್ತು ಕಡಿಮೆ ಕೆಲಸದ ಸಮಯಕ್ಕಾಗಿ ಒತ್ತಾಯಿಸಲು ಪ್ರಾರಂಭಿಸಿದರು.

ಭಾರತ (india), ಕ್ಯೂಬಾ (cuba) ಮತ್ತು ಚೀನಾ (china) ಸೇರಿದಂತೆ 80ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ದುಡಿಯುವ ವರ್ಗದ ಜನರ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸಲು ವಿಶ್ವದ ವಿವಿಧ ಭಾಗಗಳಲ್ಲಿನ ಜನರು ಈ ದಿನದಂದು ಮೆರವಣಿಗೆಗಳನ್ನು ನಡೆಸುತ್ತಾರೆ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ನಿತ್ಯದ ಕೆಲಸದಲ್ಲಿ ಸಾಧನೆ ಮಾಡಿರುವ ಕೆಲವು ಕಾರ್ಮಿಕರನ್ನು ಗುರುತಿಸಿ ಸಮ್ಮಾನವನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

ಇದರ ಇತಿಹಾಸ ಹೀಗಿದೆ

19ನೇ ಶತಮಾನದಲ್ಲಿ ಕಾರ್ಮಿಕ ದಿನಾಚರಣೆಯ ಪ್ರಾರಂಭವಾಯಿತು. ಅಮೆರಿಕದ ಚಿಕಾಗೋದಲ್ಲಿ 1886ರ ಮೇ 1 ರಂದು ಕಾರ್ಮಿಕರು ಕೆಲಸದ ದಿನವನ್ನು ಎಂಟು ಗಂಟೆಗೆ ನಿಗದಿ ಪಡಿಸುವಂತೆ ಒತ್ತಾಯಿಸಿ ಮುಷ್ಕರವನ್ನು ಆಯೋಜಿಸಿದ್ದರು. ಹೇಮಾರ್ಕೆಟ್ ಸ್ಕ್ವೇರ್‌ನಲ್ಲಿ ನಡೆದ ಕಾರ್ಮಿಕ ರ್ಯಾಲಿಯ ವೇಳೆ ಬಾಂಬ್ ಸ್ಫೋಟಗೊಂಡ ಅನಂತರ ಅಮೆರಿಕದಾದ್ಯಂತ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಮತ್ತು ಉತ್ತಮ ಕೆಲಸದ ಪರಿಸ್ಥಿತಿಗಳಿಗಾಗಿ ಹೋರಾಡಲು ಒಗ್ಗೂಡಿದರು.

1889ರಲ್ಲಿ ಸಮಾಜವಾದಿ ಪಕ್ಷಗಳ ಅಂತಾರಾಷ್ಟ್ರೀಯ ಕಾಂಗ್ರೆಸ್ ಪ್ಯಾರಿಸ್ ನಲ್ಲಿ ಸಭೆ ಸೇರಿತು. ಮೇ 1ರಂದು ಕಾರ್ಮಿಕರ ದಿನ ಅಥವಾ ಕಾರ್ಮಿಕರ ದಿನವನ್ನು ಆಚರಿಸಲು ನಿರ್ಧಾರ ಕೈಗೊಂಡಿತು.


ಚೆನ್ನೈನಲ್ಲಿ ಮೊದಲ ಕಾರ್ಯಕ್ರಮ

ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕ ದಿನವನ್ನು 1923ರ ಮೇ 1ರಂದು ಚೆನ್ನೈನಲ್ಲಿ ಆಚರಿಸಲಾಯಿತು. ಮೊದಲ ಮೇ ದಿನಾಚರಣೆಯನ್ನು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆಯೋಜಿಸಿತ್ತು. ಪಕ್ಷದ ನಾಯಕ ಕಾಮ್ರೇಡ್ ಸಿಂಗರವೇಲರ್ ಈ ಕಾರ್ಯಕ್ರಮವನ್ನು ಆಚರಿಸಲು ಎರಡು ಸಭೆಗಳನ್ನು ಆಯೋಜಿಸಿದ್ದರು.
ಕಾರ್ಮಿಕರ ದಿನವನ್ನು ವಿವಿಧ ಭಾರತೀಯ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಅತ್ಯಂತ ಜನಪ್ರಿಯ ಹೆಸರು ಮೇ ದಿನವಾಗಿದೆ.

ಕಾರ್ಮಿಕರ ದಿನವನ್ನು ಹಿಂದಿಯಲ್ಲಿ ಕಾಮ್‌ಗರ್ ದಿನ್, ಕನ್ನಡದಲ್ಲಿ ಕಾರ್ಮಿಕ ದಿನಚರಣೆ, ತೆಲುಗಿನಲ್ಲಿ ಕಾರ್ಮಿಕ ದಿನೋತ್ಸವ, ಮರಾಠಿಯಲ್ಲಿ ಕಾಮ್‌ಗರ್ ದಿವಸ್, ತಮಿಳಿನಲ್ಲಿ ಉಜೈಪಾಲರ್ ದೀನಂ, ಮಲಯಾಳಂನಲ್ಲಿ ಥೋಝಿಲಾಲಿ ದಿನಂ ಮತ್ತು ಬಂಗಾಳಿಯಲ್ಲಿ ಶ್ರೋಮಿಕ್ ದಿಬೋಶ್ ಎಂದು ಕರೆಯಲಾಗುತ್ತದೆ.

ಈ ದಿನದ ಉದ್ದೇಶ ಏನು?

ದುಡಿಯುವ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸಲು ಕಾರ್ಮಿಕರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ನಮ್ಮ ಸಮಾಜದಲ್ಲಿ ಕಾರ್ಮಿಕ ವರ್ಗದ ಪ್ರಮುಖ ಪಾತ್ರವನ್ನು ನೆನಪಿಸುತ್ತದೆ. ಕಾರ್ಮಿಕರ ಶ್ರಮವನ್ನು ಗೌರವಿಸುವುದು ಮತ್ತು ಅವರ ಘನತೆಯನ್ನು ಎತ್ತಿ ಹಿಡಿಯುವುದು ಈ ದಿನದ ವಿಶೇಷವಾಗಿದೆ.

Exit mobile version