ಬೆಂಗಳೂರು: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು 2000 ಪರವಾನಗಿ ಭೂಮಾಪಕರ ನೇಮಕಕ್ಕೆ (Land Surveyor Recruitment ) ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಮತ್ತೆ ವಿಸ್ತರಿಸಲಾಗಿ. ಈಗ ಅಭ್ಯರ್ಥಿಗಳು ಮಾ.10ರ ವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಫೆ. 20 ಕೊನೆಯ ದಿನವೆಂದು ಪ್ರಕಟಿಸಲಾಗಿತ್ತು. ನಂತರ ಇಲಾಖೆಯು ಫೆ 27ರವರೆಗೆ ವಿಸ್ತರಿಸಿತ್ತು. ಈಗ ಮಾ.10ರ ವರೆಗೆ ವಿಸ್ತರಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅಭ್ಯರ್ಥಿಗಳಿಗೆ ಒಂದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ, ಅರ್ಜಿ ಸಲ್ಲಿಸಿದ ದಿನಾಂಕದ ಆಧಾರದ ಮೇಲೆ ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಒಮ್ಮೆ ಅರ್ಜಿ ಸಲ್ಲಿಸದ ನಂತರ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಸೂಚನೆಗಳನ್ನು ಓದಿಕೊಂಡು ಅರ್ಜಿಯನ್ನು ದಪ್ಪ ಅಕ್ಷರಗಳಲ್ಲಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಿಗದಿತ ಚೌಕಗಳಲ್ಲೇ ಭರ್ತಿ ಮಾಡಬೇಕೆಂದು ಕಂದಾಯ ಇಲಾಖೆಯು ಮನವಿ ಮಾಡಿದೆ.
ವಿದ್ಯಾರ್ಹತೆ ಏನು?
ಕನಿಷ್ಠ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ. ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇ. 60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬಿ.ಇ.(ಸಿವಿಲ್)/ಅಥವಾ ಬಿ.ಟಿಕ್(ಸಿವಿಲ್)/ ಅಥವಾ ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ ಸರ್ವೆ” ಯಲ್ಲಿ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐ.ಟಿ.ಐ. ಇನ್ ಸರ್ವೆ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೆ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಾಗಿರುತ್ತಾರೆ.
ಭೂದಾಖಲೆಗಳನ್ನು ಕನ್ನಡ ಭಾಷೆಯಲ್ಲಿ ತಯಾರಿಸಬೇಕಾದ ಕಾರಣ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ./ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಪಡೆದು ತೇರ್ಗಡೆ ಹೊಂದಿರಬೇಕು ಅಥವಾ ಕೆ.ಪಿ.ಎಸ್.ಸಿ.ಯು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡದಿರಬೇಕು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ವಯೋಮಿತಿ ಎಷ್ಟು?
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ 65 ವರ್ಷಗಳು.
ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಅವರ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ/ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) / ಕ್ಯುಮುಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುವುದು. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2023 (5 ಗಂಟೆಯ ಒಳಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-03-2023
ಸಹಾಯವಾಣಿ ಸಂಖ್ಯೆ: 080-22221038
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ ವಿಳಾಸ: https://landrecords.karnataka.gov.in/
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಶುಲ್ಕ ರೂ.1000 ಎಂದು ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಶುಲ್ಕವನ್ನು ಕೂಡ ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ. ಇಂಟರ್‌ನೆಟ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಎಲ್ಲೆಲ್ಲಿ ಹುದ್ದೆಗಳಿವೆ?
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ನೇಮಕ ನಡೆಯಲಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಪರವಾನಗಿ ಭೂಮಾಪಕರ ಸಂಖ್ಯೆ ಇದೆ ಎಂದರೆ; ಉಡುಪಿ 86, ಉತ್ತರಕನ್ನಡ 75, ಕೊಡಗು 25, ಕೋಲಾರ 53, ಗದಗ 54, ಚಿಕ್ಕಮಗಳೂರು 83, ಚಿತ್ರದುರ್ಗ 73, ಚಾಮರಾಜನಗರ 35, ತುಮಕೂರು 110, ದಕ್ಷಿಣ ಕನ್ನಡ 36, ದಾವಣಗೆರೆ 95, ಧಾರವಾಡ 92, ಬೆಂಗಳೂರು ಗ್ರಾಮಾಂತರ 66, ಬೆಂಗಳೂರು ಜಿಲ್ಲೆ 125, ಬಿಜಾಪುರ 32, ಬೆಳಗಾವಿ 85, ಬಳ್ಳಾರಿ 55, ವಿಜಯನಗರ 47, ಬಾಗಲಕೋಟೆ 47, ಬೀದರ್ 35, ಮಂಡ್ಯ 71, ಮೈಸೂರು 40, ಯಾದಗಿರಿ 20, ರಾಮನಗರ 100, ರಾಯಚೂರು 40, ಶಿವಮೊಗ್ಗ 125, ಹಾವೇರಿ 152, ಹಾಸನ 60, ಕೊಪ್ಪಳ 28, ಕಲಬುರಗಿ 10, ಚಿಕ್ಕಬಳ್ಳಾಪುರ 45. ಒಟ್ಟು 2000.
ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಆನ್‌ಲೈನ್‌ನಲ್ಲಿ ಈ ಪರೀಕ್ಷೆ ನಡೆಯಲಿದ್ದು, ಎರಡು ಪ್ರಶ್ನೆ ಪತ್ರಿಕೆಗಳಿರಲಿವೆ. ಪತ್ರಿಕೆ-1ಸಾಮಾನ್ಯ ಪತ್ರಿಕೆಯಾದರೆ ಪತ್ರಿಕೆ-2 ನಿರ್ಧಿಷ್ಟ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆಯಾಗಿದೆ. ತಲಾ 100 ಅಂಕ ನಿಗದಿಯಾಗಿರುತ್ತದೆ. ವಸ್ತುನಿಷ್ಟ ಬಹು ಆಯ್ಕೆಯ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಸರಿಯಾದ ಉತ್ತರವನ್ನು ಓಎಂಆರ್ ಶೀಟ್‌ನಲ್ಲಿ ಗುರುತಿಸಬೇಕಿರುತ್ತದೆ. ಈ ಪರೀಕ್ಷೆಯಲ್ಲಿ ಪಡೆಯುವ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಈ ಆಯ್ಕೆಗೆ ಯಾವುದೇ ಸಂದರ್ಶನ ಇರುವುದಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ( Click Here ) ಮಾಡಿ.
ಜಿಲ್ಲಾವಾರು ಮೆರಿಟ್ ಪಟ್ಟಿ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ತಾನು ಆಯ್ಕೆ ಬಯಸುವ ಯಾವುದಾದರೂ ಒಂದು ಜಿಲ್ಲೆಯನ್ನು ಮಾತ್ರ ಗುರುತಿಸಿರಬೇಕು. ಆಯ್ಕೆ ಬಯಸಿದ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಗೆ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷೆಯ ಖಚಿತ ದಿನಾಂಕವನ್ನು ಮುಂದೆ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ : KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ