ನವ ದೆಹಲಿ: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಲ್ಲಿ ಮತ್ತೊಂದು ಹಂತದ ಉದ್ಯೋಗ ಕಡಿತ (Meta Layoffs) ಪಕ್ಕಾ ಆಗಿದೆ. 2022ರ ನವೆಂಬರ್ನಲ್ಲಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದ ಸಂಸ್ಥೆ, ಈ ಬಾರಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದಾಗಿ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಲ್ಲದೆ, ಇಂಥ ನಿರ್ಧಾರ ಮಾಡಿದ್ದಕ್ಕೆ ಕ್ಷಮೆಯನ್ನೂ ಕೇಳಿದೆ. ಏಪ್ರಿಲ್ ಕೊನೇ ವಾರದಲ್ಲಿ ಈ ವಜಾ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿಯ ಸಿಇಒ ಮಾರ್ಕ್ ಜುಕರ್ಬರ್ಗ್ ಕೂಡ ಸ್ಪಷ್ಟಪಡಿಸಿದ್ದಾರೆ.
ವಜಾಗೊಳ್ಳಲಿರುವ ಉದ್ಯೋಗಿಗಳಿಗೆ ಈಗಾಗಲೇ ಇಮೇಲ್ ಕೂಡ ಹೋಗಿದೆ. ನಮ್ಮ ಕಂಪನಿಯಲ್ಲಿ ಕಡಿಮೆ ಆದ್ಯತೆ ಇರುವ ಯೋಜನೆಗಳನ್ನು ರದ್ದುಗೊಳಿಸುವುದು, ನೇಮಕಾತಿ ಪ್ರಮಾಣವನ್ನು ಕಡಿಮೆ ಮಾಡುವುದರ ಬಗ್ಗೆ ಮುಂದಿನ ಎರಡು ತಿಂಗಳಲ್ಲಿ ನಮ್ಮ ಸಂಸ್ಥೆಯ ಪ್ರಮುಖರು ನಿರ್ಧರಿಸುತ್ತಾರೆ. ನಾನು ನಮ್ಮ ನೇಮಕಾತಿ ತಂಡದ ಗಾತ್ರವನ್ನೂ ಕಡಿಮೆ ಮಾಡಲು ಕಠಿಣ ನಿರ್ಧಾರ ಮಾಡಿದ್ದೇನೆ’ ಎಂದು ಜುಕರ್ ಬರ್ಗ್ ಹೇಳಿದ್ದಾರೆ.
ಇದನ್ನೂ ಓದಿ: Meta Layoff : ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಲ್ಲಿ ಮತ್ತೆ ಸಾವಿರಾರು ಉದ್ಯೋಗ ಕಡಿತ
ಹಾಗೇ, ಮೆಟಾದಲ್ಲಿ ಖಾಲಿ ಇರುವ 5000 ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ವಿವಿಧ ಹುದ್ದೆಗಳಿಗೆ ಸೇರಿ ಇನ್ನೂ 5000 ಜನರನ್ನು ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ ನಾವದನ್ನು ಮಾಡುವುದಿಲ್ಲ. ಆ 5 ಸಾವಿರ ಪೋಸ್ಟ್ಗಳನ್ನೂ ತೆಗೆದು ಹಾಕುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ಮಾರ್ಕ್ ಜುಕರ್ಬರ್ಗ್, ‘ಜಾಗತಿಕ ಆರ್ಥಿಕತೆ ಬದಲಾವಣೆ ಆಯಿತು. ಸ್ಪರ್ಧಾತ್ಮಕ ಒತ್ತಡ ಬಾಧಿಸುತ್ತಿದೆ. ನಮ್ಮ ಕಂಪನಿಯ ಬೆಳವಣಿಗೆ ನಿಧಾನಗೊಂಡಿದೆ. ಹೀಗೆ ಹತ್ತು-ಹಲವು ಕಾರಣಗಳಿಂದ ಮೆಟಾದ ಶೇ.13ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಕಠಿಣ ನಿರ್ಧಾರ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.