Site icon Vistara News

Motivational | ಮಗನೊಂದಿಗೆ ಓದುತ್ತಾ ಓದುತ್ತಾ ಅಮ್ಮನೂ ಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದ್ಳು!

mother and son kerala

ಮಲಪ್ಪುರಂ: ಮಕ್ಕಳನ್ನು ಓದಿ ಓದಿ ಎಂದು ಬೊಬ್ಬೆ ಹೊಡೆಯುತ್ತಾ ತಾವು ಮಾತ್ರ ಮೊಬೈಲ್‌ ನೋಡುತ್ತಾ, ಟೀವಿ ವೀಕ್ಷಿಸುತ್ತಾ, ಇನ್ನೊಬ್ಬರ ಜತೆ ಹರಟೆ ಹೊಡೆಯುತ್ತಾ ಇರುವ ಕೆಲವು ತಾಯಂದಿರನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ತಾಯಿ ಮಗನನ್ನು ಓದಿಸುತ್ತಾ ಓದಿಸುತ್ತಾ ತಾನೂ ಪುಸ್ತಕ ಹಿಡಿದು ಕುಳಿತಿದ್ದರು. ಮಗ ಎಷ್ಟು ಹೊತ್ತು ಓದುತ್ತಾನೋ ಅಷ್ಟು ಹೊತ್ತು ತಾವೂ ಓದಿದರು. ಈಗ ಅವರಿಬ್ಬರೂ ಉನ್ನತ ಸರಕಾರಿ ಅಧಿಕಾರಿಗಳು!

ಹೌದು, ಕಳೆದ ವಾರ ಪ್ರಕಟಗೊಂಡ ಕೇರಳ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶದಲ್ಲಿ ತಾಯಿ ಮತ್ತು ಮಗ ಇಬ್ಬರೂ ಉನ್ನತ ಶ್ರೇಯಾಂಕದೊಂದಿಗೆ ಪಾಸ್‌ ಆಗಿದ್ದು, ಇನ್ನೇನು ಜತೆಗೇ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಮಗನಿಗೆ ಉದ್ಯೋಗ ಸಿಕ್ಕಿತು ಎಂದು ತಾಯಿ ಖುಷಿಪಡುತ್ತಾಳೆ. ಆದರೆ, ಇಲ್ಲಿ ಇಬ್ಬರಿಗೂ ಒಟ್ಟಿಗೇ ಒಳ್ಳೆಯ ಉದ್ಯೋಗ ಸಿಗಲಿದೆ ಎಂದು ಅವರ ಮನೆ ಸಂಭ್ರಮಿಸುತ್ತಿದೆ.

ಹೀಗೆ ಪುತ್ರನ ಜತೆ ಕಲಿತು ಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದವರು ಕೇರಳದ ಮಲಪ್ಪುರಂನ ಬಿಂದು. ಇವರಿಗೆ 42 ವರ್ಷ. ಇವರ ಪುತ್ರ ವಿವೇಕ್‌ಗೆ 24 ವರ್ಷ. ಬಿಂದು ಅವರು ಎನ್‌ಜಿಎಸ್‌ ಪರೀಕ್ಷೆಯಲ್ಲಿ ೯೨ನೇ ರ‍್ಯಾಂಕ್‌ ಪಡೆದಿದ್ದರೆ, ವಿವೇಕ್‌ ಕ್ಲರ್ಕ್‌ ಎಕ್ಸಾಂನಲ್ಲಿ ೩೮ನೇ ರ‍್ಯಾಂಕ್‌ ಪಡೆದಿದ್ದಾರೆ.

ಇದೆಲ್ಲ ಆರಂಭವಾಗಿದ್ದು ವಿವೇಕ್‌ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಿದ್ಧನಾಗುತ್ತಿದ್ದಾಗ. ೧೦ನೇ ತರಗತಿ ಪರೀಕ್ಷೆಗೆ ಮಗ ಚೆನ್ನಾಗಿ ಓದಬೇಕು ಎಂದು ಬಯಸಿದ ತಾಯಿ ಬಿಂದು ಅವರು ತಾನೂ ಮಗನ ಜತೆ ಓದಲು ಕುಳಿತರು. ತಾನೂ ಪುಸ್ತಕ ಓದಲು ಆರಂಭಿಸಿದರು. ಜನರಲ್‌ ನಾಲೆಡ್ಜ್‌, ವಿಜ್ಞಾನ, ಕಥೆ, ಕಾದಂಬರಿ ಸೇರಿದಂತೆ ಎಲ್ಲವನ್ನೂ ಓದಿದರು. ಆಗ ಆರಂಭವಾದ ಹವ್ಯಾಸ ಬಳಿಕ ನಿರಂತರವಾಯಿತು.

ಬಿಂದು ಅವರು ಕಳೆದ ೧೦ ವರ್ಷಗಳಿಂದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಆದರೂ ಓದುವ ಹವ್ಯಾಸ ಬಿಟ್ಟಿಲ್ಲ. ನಿಜ ಅಂದರೆ, ಬಿಂದು ಹಲವು ಬಾರಿ ಲೋಕಸೇವಾ ಆಯೋಗ ಪರೀಕ್ಷೆ ಬರೆದಿದ್ದರು. ಮೂರು ವಿಫಲ ಪ್ರಯತ್ನಗಳು ಅವರ ಅನುಭವವನ್ನು ಹೆಚ್ಚಿಸಿದೆ! ಈ ನಡುವೆ ಮಗ ವಿವೇಕ್‌ ಕೂಡಾ ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸತೊಡಗಿದ. ಆಗ ಅವರಿಬ್ಬರೂ ಮತ್ತೆ ಜಿದ್ದಿಗೆ ಬಿದ್ದಂತೆ ಓದಿದರು. ಪರೀಕ್ಷೆಗೆ ಏನೇನು ಬೇಕೋ ಅದೆಲ್ಲವನ್ನು ಕಲಿಯಲು ಶುರು ಮಾಡಿದರು. ಹೀಗೆ ಓದುತ್ತಾ ಓದುತ್ತಾ ಎಲ್ಲವನ್ನೂ ಅರಗಿಸಿಕೊಂಡು ಜತೆಯಾಗಿ ಗೆದ್ದು ಬಿಟ್ಟರು.

ತಾಯಿ ಮತ್ತು ಮಗ ಜತೆಯಾಗಿ ಅಧ್ಯಯನ

‘ನಾನು ಕೆಲಸ ಮಾಡುತ್ತಿರುವುದರಿಂದ ಮಗನೊಂದಿಗೆ ಕೂತು ಓದಲು ಸಾಧ್ಯವಾಗಲಿಲ್ಲ. ಆದರೆ, ಇಬ್ಬರೂ ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಪರೀಕ್ಷೆಯ 6 ತಿಂಗಳ ಮುಂಚೆ ತಾನು ಸಿದ್ಧತೆ ಆರಂಭಿಸಿದ್ದೆʼʼ ಎಂದು ಬಿಂದು ಹೇಳಿದ್ದಾರೆ.

‘ನನ್ನ ನಿಜವಾದ ಗುರಿ ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್‌ (ಐಸಿಡಿಎಸ್‌) ಮೇಲ್ವಿಚಾರಕರ ಹುದ್ದೆ ಪಡೆಯುವುದಾಗಿತ್ತು. ಆದರೆ ಎಲ್‌ಜಿಎಸ್‌ ಆಗಿ ನೇಮಕಗೊಂಡಿದ್ದೇನೆ. ಎಷ್ಟು ಸಾರಿ ಸೋತರೂ ಮತ್ತೆ ಗೆಲ್ಲಬಹುದು ಎನ್ನುವುದು ನಾನು ಮೂರು ಬಾರಿ ಸೋತು ನಾಲ್ಕನೇ ಬಾರಿ ಗೆದ್ದಾಗ ಕಂಡುಕೊಂಡ ಸತ್ಯʼʼ ಎಂದಿದ್ದಾರೆ ಬಿಂದು.

ʻʻನಾನು ಮತ್ತು ಅಮ್ಮ ಜತೆಯಾಗಿ ಸ್ಟಡಿ ಮಾಡುತ್ತಿರಲಿಲ್ಲ. ಕೆಲವು ವಿಷಯಗಳನ್ನು ಚರ್ಚೆ ಮಾಡುತ್ತಿದ್ದೆವು. ಅಮ್ಮ ಕೆಲಸ ಮತ್ತು ಮನೆ ಕೆಲಸ ಮಾಡಿ ನಂತರ ಓದುತ್ತಿದ್ದರು. ನನಗೆ ಸಿಕ್ಕಿದ್ದಷ್ಟು ಸಮಯ ತಾಯಿಗೆ ಸಿಕ್ಕಿಲ್ಲ. ಆದರೂ 92ನೇ ರ‍್ಯಾಂಕ್‌ ಪಡೆದಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ ಪುತ್ರ ವಿವೇಕ್.‌ ಅಂದ ಹಾಗೆ ಅಮ್ಮ-ಮಗನ ಈ ಸಾಹಸಕ್ಕೆ ಸಂಪೂರ್ಣ ಬೆಂಬಲ ಕೊಟ್ಟವರು ತಂದೆ.

ಇದನ್ನೂ ಓದಿ | NDA-NA Exam | ಸೇನೆ ಸೇರಿ ಅಧಿಕಾರಿಯಾಗಬೇಕೇ? ನೀವು ಪಿಯು ಓದುವಾಗಲೇ ಈ ಪರೀಕ್ಷೆ ಬರೆಯಿರಿ!

Exit mobile version