ಬೆಂಗಳೂರು: ಎನ್‌ಪಿಎಸ್ ನೌಕರರ (NPS employees) ಬಹುದಿನಗಳ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆಯೇ? ಇದೇ ಡಿಸೆಂಬರ್‌ನಲ್ಲಿ ಎನ್‌ಪಿಎಸ್ (National Pension System – ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ರದ್ದು ಮಾಡಿ (NPS Cancellation) ಒಪಿಎಸ್ (Old Pension Scheme – ಹಳೆಯ ಪಿಂಚಣಿ ಯೋಜನೆ) ಅನ್ನು ಮರು ಜಾರಿ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ತಾವು ನುಡಿದಂತೆ ನಡೆದಿದ್ದೇವೆ. ನಮ್ಮದು ಭರವಸೆಯನ್ನು ಈಡೇರಿಸುವ ಸರ್ಕಾರ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಬಹುತೇಕ ವಾಗ್ದಾನಗಳನ್ನು ಕಳೆದ ಸರ್ಕಾರದಲ್ಲಿ ಈಡೇರಿಸಿದ್ದೇವೆ. ಈಗಲೂ ಈಡೇರಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಹೊರಡಿಸಿದ್ದ ಪ್ರಣಾಳಿಕೆಯಲ್ಲಿ (Congress Manifesto) ಎನ್‌ಪಿಎಸ್ ಅನ್ನು ರದ್ದು ಮಾಡಿ, ಒಪಿಎಸ್ ಅನ್ನೇ ಜಾರಿಗೆ ತರಲಾಗುವುದು. ಈ ಮೂಲಕ ಸರ್ಕಾರಿ ನೌಕರರ ಹಿತ ಕಾಪಾಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿತ್ತು. ಈಗ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: HD Kumaraswamy : ಸಿದ್ದರಾಮಯ್ಯ ಮನೆಗೆ ಕೋಟಿ ಬೆಲೆಯ ಸೋಫಾ ಸೆಟ್ ಗಿಫ್ಟ್; ಹ್ಯೂಬ್ಲೋಟ್ ವಾಚ್ ವರ್ಷನ್ 2 ಎಂದ ಎಚ್‌ಡಿಕೆ
ಶೀಘ್ರದಲ್ಲೇ ಆರ್ಥಿಕ ಇಲಾಖೆ ಜತೆ ಸಿಎಂ ಸಭೆ
ರಾಜ್ಯದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಗಳ ಹೊರೆ ಇದೆ. ಈ ನಡುವೆ ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗುತ್ತಿಲ್ಲ ಎಂಬ ಕೂಗುಗಳು ಕೇಳಿ ಬರುತ್ತಿವೆ. ಅಲ್ಲದೆ, ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕರಾದಿಯಾಗಿ ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಜತೆಯಲ್ಲಿಯೇ ಅನುದಾನಗಳನ್ನು ಕೊಡುವ ಭರವಸೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಎನ್‌ಪಿಎಸ್ ತೆಗೆದು ಒಪಿಎಸ್ ಅನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರೆ ಮುಂದಾಗುವ ಸಾಧಕ – ಬಾಧಕಗಳು ಏನು? ರಾಜ್ಯದ ಮೇಲೆ ಆಗುವ ಆರ್ಥಿಕ ಹೊರೆ ಏನು? ಈಗಿರುವ ಎಲ್ಲ ಲೆಕ್ಕಾಚಾರಗಳ ನಡುವೆ ಅದನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬಹುದಾ ಎಂದು ಆರ್ಥಿಕ ಇಲಾಖೆ ಜತೆ ಶೀಘ್ರದಲ್ಲಿಯೇ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಎನ್‌ಪಿಎಸ್ ರದ್ದತಿಗೆ ಆರ್ಥಿಕ ಇಲಾಖೆಯಿಂದ ಆಕ್ಷೇಪ!
ಎನ್‌ಪಿಎಸ್ ರದ್ದತಿ ಬಗ್ಗೆ ರಾಜ್ಯ ಸರ್ಕಾರ ಪ್ರಸ್ತಾಪ ಇಟ್ಟಾಗಲೆಲ್ಲ ಆರ್ಥಿಕ ಇಲಾಖೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗಲಿದೆ. ಹೆಚ್ಚುವರಿ ಹಣವನ್ನು ಅಲ್ಲಿಗೆ ವಿನಿಯೋಗಿಸಿದರೆ ಉಳಿದ ಕಾರ್ಯಕ್ರಮಗಳಿಗೆ ಹಣದ ಸಮಸ್ಯೆಯಾಗುತ್ತದೆ. ಇದು ಆರ್ಥಿಕ ಶಿಸ್ತಿನ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಒಪಿಎಸ್ ಜಾರಿ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಡಿಸೆಂಬರ್‌ನಲ್ಲಿ ಎನ್‌ಪಿಎಸ್ ನೌಕರರ ಸಮಾವೇಶದಲ್ಲಿ ಘೋಷಣೆ?
ಡಿಸೆಂಬರ್‌ನಲ್ಲಿ ಎನ್‌ಪಿಎಸ್ ನೌಕರರ ಸಮಾವೇಶ ನಡೆಯುತ್ತಲಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಎನ್‌ಪಿಎಸ್ ನೌಕರರು ಈ ಸಮಾವೇಶದಲ್ಲಿ ಒಪಿಎಸ್ ಜಾರಿಗಾಗಿ ಸಿಎಂ ಎದುರು ಹಕ್ಕೊತ್ತಾಯವನ್ನು ಮಂಡನೆ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಮೊದಲೇ ಸಾಧಕ – ಬಾಧಕಗಳ ಬಗ್ಗೆ ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರೆ ಸಮಾವೇಶದಲ್ಲಿ ಘೋಷಣೆ ಮಾಡಲು ಅನುಕೂಲ ಆಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಆಗಿದೆ. ಹೀಗಾಗಿ ಎನ್‌ಪಿಎಸ್ ನೌಕರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಒಪಿಎಸ್ ಜಾರಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಆರ್ಥಿಕ ಇಲಾಖೆ ಜತೆ ಸಿಎಂ ಸಭೆಗೆ ಮುಂದಾದರೇ? ಈ ವಿಡಿಯೊ ನೋಡಿ
ಯಾವ ಯಾವ ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದು? ಒಪಿಎಸ್ ಜಾರಿ?
ರಾಜಸ್ಥಾನ, ಹಿಮಾಚಲ ಪ್ರದೇಶ, ಚತ್ತೀಸ್‌ಗಢ, ಜಾರ್ಖಂಡ್ ರಾಜ್ಯಗಳಲ್ಲಿ ಎನ್‌ಪಿಎಸ್ ಅನ್ನು ರದ್ದು ಮಾಡಲಾಗಿದೆ. ಇಲ್ಲೆಲ್ಲ ಕಡೆ ಒಪಿಎಸ್ ಅನ್ನು ಜಾರಿ ಮಾಡಲಾಗಿದೆ. ಈ ಎಲ್ಲ ಕಡೆ ಕಾಂಗ್ರೆಸ್ ಆಡಳಿತದಲ್ಲಿದೆ. ಈಗ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಆಡಳಿತದಲ್ಲಿ ಇರುವುದರಿಂದ ಎನ್‌ಪಿಎಸ್ ಅನ್ನು ರದ್ದು ಮಾಡಬಹುದು ಎಂಬ ಆಶಾವಾದದಲ್ಲಿ ನೌಕರರು ಇದ್ದಾರೆ.
ಇದನ್ನೂ ಓದಿ: BY Vijayendra : ನ. 17ಕ್ಕೆ ವಿಪಕ್ಷ ನಾಯಕನ ಆಯ್ಕೆ ಫಿಕ್ಸ್; ಬಿ.ವೈ. ವಿಜಯೇಂದ್ರ ಮಾತಿನ ಅರ್ಥ ಇದು
10,346.90 ಕೋಟಿ ರೂಪಾಯಿ ವಾರ್ಷಿಕ ವೆಚ್ಚ
ರಾಜ್ಯ ಸರ್ಕಾರಿ ನೌಕರರಲ್ಲಿ ಒಟ್ಟು 2,65,715 ಎನ್‌ಪಿಎಸ್ ನೌಕರರು ಇದ್ದಾರೆ. 10,346.90 ಕೋಟಿ ರೂಪಾಯಿಯನ್ನು ಇವರಿಗೆ ವರ್ಷಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡುತ್ತಾ ಬಂದಿದೆ. 8308 ಕೋಟಿ ರೂಪಾಯಿ ಸರ್ಕಾರಿ ನೌಕರರ ವೇತನದಿಂದ ಕಡಿತವಾಗುತ್ತದೆ. ಈ ಎಲ್ಲರೂ ಸಹ ತಮಗೆ ಹಳೇ ಪಿಂಚಣಿ ವ್ಯವಸ್ಥೆಯೇ ಬೇಕು ಎಂದು ಪಟ್ಟು ಹಿಡಿದ್ದಾರೆ.