ಬೆಂಗಳೂರು/ರಾಮನಗರ: ‘ಸ್ಕಿಲ್ ಇಂಡಿಯಾʼ ಅಭಿಯಾನವನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ), 2023ನೇ ಸಾಲಿನ ʼಟೊಯೊಟಾ ಕೌಶಲ್ಯ ಕಾರ್ಯಕ್ರಮʼದಲ್ಲಿ (Toyota Kaushalya 2023) ಯುವತಿಯರ ಪ್ರವೇಶಕ್ಕೆ ಅವಕಾಶ ನೀಡಿದೆ. ವಿಶ್ವದರ್ಜೆಯ ತಾಂತ್ರಿಕ ತರಬೇತಿ ನೀಡಿ ಯುವತಿಯರನ್ನು ಸಬಲೀಕರಣಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಆಸಕ್ತರು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಮಹಾನಿರ್ದೇಶಕರ (ಡಿಜಿಟಿ) ಸಹಯೋಗದೊಂದಿಗೆ ಈ ಕಾರ್ಯಕ್ರಮವು ಕರ್ನಾಟಕದ ಯುವ, ಸೌಲಭ್ಯ ವಂಚಿತ ಮಹಿಳೆಯರಿಗೆ ಆಟೋಮೋಟಿವ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನನ್ಯ ಅವಕಾಶವನ್ನು ನೀಡುತ್ತದೆ. ಇದಕ್ಕೂ ಮೊದಲು ಜೂನ್ 23ರಂದು ಯುವಕರನ್ನು ತರಬೇತಿಗೆ ಆಹ್ವಾನಿಸಲಾಗಿತ್ತು. ಪ್ರಸ್ತುತ ಈ ಕಾರ್ಯಕ್ರಮವು ಇಲ್ಲಿಯವರೆಗೆ ಶೇ.8ರಷ್ಟು ಯುವತಿಯರಿಗೆ ಅವಕಾಶ ಕಲ್ಪಿಸಿದೆ. 2025ರ ಅಂತ್ಯದ ವೇಳೆಗೆ ಶೇ. 30 ಯುವತಿಯರಿಗೆ ಪ್ರವೇಶ ನೀಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ | SBI recruitment 2023: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯುವತಿಯರಿಗೆ ವಿಶ್ವದರ್ಜೆಯ ತಾಂತ್ರಿಕ ತರಬೇತಿ ಒದಗಿಸುವ ಮತ್ತು ಉತ್ತಮ ತಂತ್ರಜ್ಞರಾಗಲು ಅಗತ್ಯವಾದ ಕೌಶಲ್ಯ, ಜ್ಞಾನದೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ಆಟೋಮೋಟಿವ್ ವೆಲ್ಡ್ ತಂತ್ರಜ್ಞ, ಆಟೋಮೋಟಿವ್ ಪೇಂಟ್ ತಂತ್ರಜ್ಞ, ಆಟೋಮೋಟಿವ್ ಅಸೆಂಬ್ಲಿ ತಂತ್ರಜ್ಞ ಮತ್ತು ಮೆಕಾಟ್ರಾನಿಕ್ಸ್ ತಂತ್ರಜ್ಞಾನದಲ್ಲಿ ವಿಶೇಷ ಕೋರ್ಸ್‌ಗಳಿವೆ.
ಅರ್ಹತಾ ಮಾನದಂಡ
- 18-22 ವರ್ಷ ವಯಸ್ಸಿನ ಯುವತಿಯರು
- ಕನಿಷ್ಠ ಶೈಕ್ಷಣಿಕ ಅರ್ಹತೆ: 10ನೇ ತರಗತಿ ತೇರ್ಗಡೆ / 12ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ.
- ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಭಾಷೆಯಲ್ಲಿ ಪ್ರಾವೀಣ್ಯತೆ
- ಕರ್ನಾಟಕದಲ್ಲಿ ವಾಸವಿರಬೇಕು.
- ಆಯ್ಕೆಯಾದ ಸ್ಪರ್ಧಿಗಳು ತರಗತಿ ಮತ್ತು ಕೆಲಸದ ಅಭಿವೃದ್ಧಿ ಎರಡನ್ನೂ ಒಳಗೊಂಡಿರುವ ಸಮಗ್ರ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾರೆ.
- ಈ ಕಾರ್ಯಕ್ರಮವು 2.5 ತಿಂಗಳ ತರಗತಿಯ ತರಬೇತಿಯನ್ನು ಒಳಗೊಂಡಿದೆ ಮತ್ತು ನಂತರ 21.5 ತಿಂಗಳ ಶಾಪ್ ಫ್ಲೋರ್ ಪ್ರಾಯೋಗಿಕ ತರಬೇತಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಆಸಕ್ತರಿಗೆ ಒಂದು ವರ್ಷದ ಅಪ್ರೆಂಟಿಸ್ಶಿಪ್ ಅವಕಾಶ ಲಭ್ಯವಿದೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮದ ಮುಖ್ಯಾಂಶಗಳು
- ಮೊದಲ ವರ್ಷ ರೂ.14,505 ಮತ್ತು ಎರಡನೇ ವರ್ಷ ರೂ.15,560 ಸ್ಟೈಫಂಡ್.
- ಇಎಸ್ಐ, ಸಮವಸ್ತ್ರ, ಕ್ಯಾಂಟೀನ್ ಮತ್ತು ಪಿಎಫ್ ಸೌಲಭ್ಯ.
- 24X7 ಭದ್ರತೆಯೊಂದಿಗೆ ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯ
- ಇನ್ ಡೋರ್ ಮತ್ತು ಔಟ್ ಡೋರ್ ಗೇಮ್ಸ್, ಕಂಪ್ಯೂಟರ್ ಕೊಠಡಿ, ಫಿಟ್ ನೆಸ್ ಕೇಂದ್ರ, ಗ್ರಂಥಾಲಯ, ಕ್ಲಿನಿಕ್ ಮತ್ತು ಕ್ಯಾಂಟೀನ್ ಸೌಲಭ್ಯ.
- ಕೋರ್ಸ್ ಪೂರ್ಣಗೊಳಿಸುವ ಪ್ರಮಾಣಪತ್ರ, ರಾಷ್ಟ್ರೀಯ ತರಬೇತಿ ಪ್ರಮಾಣಪತ್ರ, ಮತ್ತು ಕೌಶಲ್ಯ ಅಭಿವೃದ್ಧಿ ಪ್ರಮಾಣಪತ್ರ (ಎಎಸ್ಡಿಸಿ)
- ಆಯ್ಕೆ ಪ್ರಕ್ರಿಯೆಯು ನೋಂದಣಿ, ಮುಖಾಮುಖಿ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು, ಹಿನ್ನೆಲೆ ಪರಿಶೀಲನೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಗೆ ಕುಟುಂಬ ಭೇಟಿ ಮತ್ತು ಕಾರ್ಯಕ್ರಮಕ್ಕೆ ಸೇರುವುದನ್ನು ಒಳಗೊಂಡಿರುತ್ತದೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು, ನೋಂದಣಿ ಲಿಂಕ್‌ಗೆ ಭೇಟಿ ನೀಡಿ
ಟಿಕೆಎಂನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ.ಶಂಕರ್ ಅವರು ಮಾತನಾಡಿ, “ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಟಿಟಿಟಿಐ ಒಂದು ದಶಕದಿಂದ ನಿರ್ಣಾಯಕ ಪಾತ್ರ ವಹಿಸಿದೆ. ವಿಶ್ವದರ್ಜೆಯ ತಂತ್ರಜ್ಞರನ್ನು ಸೃಷ್ಟಿಸುವ ಮೂಲಕ, ಸಂಸ್ಥೆಯು ಸುತ್ತಮುತ್ತಲಿನ ಸಮುದಾಯಗಳ ಮೇಲೆ ಪರಿಣಾಮ ಬೀರುವುದಲ್ಲದೆ, ‘ಸ್ಕಿಲ್ ಇಂಡಿಯಾ’ ಎಂಬ ವಿಶಾಲ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದೆ. ಇಲ್ಲಿಯವರೆಗೆ ಸುಮಾರು 1000 ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆಟೋಮೊಬೈಲ್ ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಅಂತಾರಾಷ್ಟ್ರೀಯ ಮಾನದಂಡಗಳ ಜ್ಞಾನವನ್ನು ಪಡೆದಿದ್ದಾರೆ. ಅವರ ಯಶಸ್ಸು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಬೆಳೆಸುವ ಸಂಸ್ಥೆಯ ಸಮರ್ಪಣೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಯುವತಿಯರ ಪ್ರವೇಶವು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಅತ್ಯುತ್ತಮ ಆಟೋಮೊಬೈಲ್ ತರಬೇತಿಯನ್ನು ನೀಡುವ ಮೂಲಕ ಮತ್ತು ಭವಿಷ್ಯಕ್ಕಾಗಿ ಮೌಲ್ಯವನ್ನು ನಿರ್ಮಿಸುವ ಮೂಲಕ ಯುವ ಸಮುದಾಯವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ನೂತನ ಕಾರ್ಯಕ್ರಮ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.
ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಅನನ್ಯ ಅವಕಾಶ
ಟಿಟಿಟಿಐ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಎರಡು ವರ್ಷಗಳ ಉಚಿತ ವಸತಿ ಕೋರ್ಸ್ ಅನ್ನು ನೀಡುತ್ತದೆ. ಇದು ಯುವ ಸಮುದಾಯಕ್ಕೆ ಉತ್ಪಾದನಾ ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಪಡೆಯಲು ಮತ್ತು ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ಸೈದ್ಧಾಂತಿಕ ಕಲಿಕೆಯನ್ನು ಆನ್-ದಿ-ಜಾಬ್ ತರಬೇತಿ (ಒಜೆಟಿ) ಯೊಂದಿಗೆ ಸಂಯೋಜಿಸುವ ‘ಕಲಿಯಿರಿ ಮತ್ತು ಸಂಪಾದಿಸಿ’ ವಿಧಾನವನ್ನು ಅನುಸರಿಸುತ್ತದೆ.
ತಮ್ಮ ತರಬೇತಿಯ ಸಮಯದಲ್ಲಿ ಈ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಆಯಾ ಕ್ಷೇತ್ರಗಳಲ್ಲಿ ಮಾಸ್ಟರ್ ತರಬೇತುದಾರರಾಗಿರುವ ಅನುಭವಿ ಮೇಲ್ವಿಚಾರಕರಿಂದ ಮಾರ್ಗದರ್ಶನ ಪಡೆಯುವ ಭಾಗ್ಯವನ್ನು ಹೊಂದಿದ್ದು, ಗುಣಮಟ್ಟದ ತರಬೇತಿಯನ್ನು ಪಡೆಯುತ್ತಾರೆ. ಕೈಗಾರಿಕಾ ಸಂಸ್ಕೃತಿ ಮತ್ತು ಮಾನದಂಡಗಳಿಗೆ ಅನುಗುಣವಾಗಿ ಪರಿಣತಿಯನ್ನು ಅಭಿವೃದ್ಧಿಪಡಿಸುತ್ತಾರೆ. ಪ್ರಶಿಕ್ಷಣಾರ್ಥಿಗಳಿಗೆ ಉನ್ನತ ಕೌಶಲ್ಯ, ಆಳವಾದ ಜ್ಞಾನ ಮತ್ತು ಆರೋಗ್ಯಕರ ದೇಹ ಮತ್ತು ಮನಸ್ಸಿನ ತರಬೇತಿಯನ್ನು ಸಹ ನೀಡಲಾಗುವುದು.
ಅತ್ಯುತ್ತಮ ಉದ್ಯೋಗಾವಕಾಶ
ಇದಲ್ಲದೆ, ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಶೈಕ್ಷಣಿಕವಾಗಿ ಆಧಾರಿತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿದೆ. ಅವರನ್ನು ನುರಿತ ತಂತ್ರಜ್ಞರಾಗಿ ಬೆಳೆಸುವತ್ತ ಗಮನ ಹರಿಸಿದೆ. ಟಿಟಿಟಿಐನ ಪದವೀಧರರು ನಿರಂತರವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದು, ಕರ್ನಾಟಕ, ಭಾರತ ಮತ್ತು ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಇದನ್ನೂ ಓದಿ | Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?
ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಟಿಟಿಟಿಐನ ಪ್ರಯತ್ನಗಳನ್ನು ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜೆ.ಐ.ಎಂ) ನಂತಹ ಸಂಸ್ಥೆಗಳು ಗುರುತಿಸಿವೆ. ಇದು ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮಿಷನ್ ಕಾರ್ಯಕ್ರಮಕ್ಕೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ. ತನ್ನ ಅಸ್ತಿತ್ವದ ಅವಧಿಯಲ್ಲಿ ಟಿಟಿಟಿಐ ಹೆಮ್ಮೆಯಿಂದ 950ಕ್ಕೂ ಹೆಚ್ಚು ಪದವೀಧರರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರಲ್ಲಿ ಹಲವರು ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಗೌರವಾನ್ವಿತ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಆ ಮೂಲಕ ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಮೂಡಿಸಿದ್ದಾರೆ.