Site icon Vistara News

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

kpsc recruitment 2023 pdo recruitment 2023

ಬೆಂಗಳೂರು: ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿ (PDO Recruitment 2023) ಪ್ರಕಟಣೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿನ (ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-I, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-II, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-I, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-II ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮಕಕ್ಕೆ ಸದ್ಯವೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಲಿದೆ.

ಈ ಹಿಂದೆ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ನಡೆಯುತ್ತಿತ್ತು. ಈ ಹಿಂದೆ ʻವಿಸ್ತಾರ ನ್ಯೂಸ್‌ʼ ವರದಿ ಮಾಡಿದಂತೆಯೇ ಕೆಪಿಎಸ್‌ಸಿ ಮೂಲಕ ಈ ಬಾರಿ ನೇಮಕ ನಡೆಯಲಿದ್ದು, ಈ ಸಂಬಂಧ ಸರ್ಕಾರ ಜು.15 ರಂದು ಆದೇಶ ಹೊರಡಿಸಿದೆ. ಈ ಹಿಂದೆಲ್ಲಾ ಪಿಡಿಒ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ ನೇಮಕಾತಿ ನಡೆಯುತ್ತಿತ್ತು. ಇನ್ನು ಮುಂದೆ ರಾಜ್ಯಮಟ್ಟದಲ್ಲಿ ನೇಮಕಾತಿ ನಡೆಯಲಿದೆ. ಅಲ್ಲದೆ ಹುದ್ದೆಗಳ ಸಂಖ್ಯೆಯೂ ಈ ಹಿಂದೆ ಪ್ರಕಟಿಸಿದ್ದಕ್ಕಿಂತ ಅಂದರೆ 150 ಕ್ಕೆ ಬದಲಾಗಿ 350 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ ನಡೆಯುವುದು ಖಚಿತ ಪಟ್ಟಿದೆ. ಆದರೆ ಎಷ್ಟು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬುದು ಖಚಿತ ಪಟ್ಟಿಲ್ಲ.

ಕೆಪಿಎಸ್‌ಸಿ ಮೂಲಕ ನೇಮಕಕ್ಕೆ ಸರ್ಕಾರದ ಆದೇಶ.

ನೇರ ನೇಮಕಾತಿ ಕೋಟಾದಲ್ಲಿ ಪ್ರಸ್ತುತ 385 ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳು ಖಾಲಿ ಇದ್ದು, ಈ ಪೈಕಿ 150 ಹುದ್ದೆಗಳಿಗೆ ನೇರ ನೇಮಕಾತಿ (PDO Recruitment 2023) ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ (Rural Development and Panchayath Raj Department-RDPR) ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ವಿಧಾನಸಭೆಯಲ್ಲಿ ಇತ್ತೀಚೆಗಷ್ಟೇ ತಿಳಿಸಿದ್ದರು. ಇದರಂತೆಯೇ ಈ ನೇಮಕ ಪ್ರಕ್ರಿಯೆ ನಡೆಯುತ್ತಿದೆ.

ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿರುವ ಅವರು, ಒಟ್ಟಾರೆ 6,021 ಪಿಡಿಒ ಹುದ್ದೆಗಳು ಮಂಜೂರಾಗಿದ್ದು, 5,361 ಹುದ್ದೆಗಳು ಭರ್ತಿಯಾಗಿವೆ. 660 ಹುದ್ದೆಗಳು ಖಾಲಿ ಒವೆ. ಇವುಗಳನ್ನು ಬಡ್ತಿ ಮತ್ತು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ನೇರ ನೇಮಕಾತಿ ಮೂಲಕ 385 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದ್ದು, ಇವುಗಳಲ್ಲಿ ಈಗ 150 ಹುದ್ದೆಗಳ ನೇಮಕ ಪ್ರಕ್ರಿಯೆ ಮಾತ್ರ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದರು. ಆದರೆ ಅಭ್ಯರ್ಥಿಗಳ ಒತ್ತಡಕ್ಕೆ ಮಣಿದ ಸಚಿವರು ಖಾಲಿ ಇರುವ ಎಲ್ಲ ಹುದ್ದೆಗಳಿಗೂ ನೇಮಕ ಪ್ರಕ್ರಿಯೆ ನಡೆಸಲು ಇಲಾಖೆಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಸರ್ಕಾರದ ಆದೇಶದಂತೆ ಈ ಕೂಡಲೇ ನೇಮಕಾತಿ ಪ್ರಸ್ತಾವನೆಯನ್ನು ಕೆಪಿಎಸ್‌ಸಿಗೆ ಸಲ್ಲಿಸಲಿದ್ದು, ಕೆಪಿಎಸ್‌ಸಿಯು ಸದ್ಯವೇ ಅಧಿಸೂಚನೆ ಹೊರಡಿಸಲಿದೆ. ಹುದ್ದೆಗಳ ಮೀಸಲು ವರ್ಗೀಕರಣವನ್ನು ಅಂತಿಮಗೊಳಿಸಲಾಗುತ್ತಿದ್ದು, ಆದಷ್ಟು ಬೇಗ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ನೇರ ನೇಮಕಾತಿಯ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯ ವಿಧಾನಸಭೆಯಲ್ಲಿ ಸಚಿವರು ನೀಡಿದ್ದರು. ಈ ಪ್ರಕಾರ ಬೆಂಗಳೂರು ಗ್ರಾಮಾಂತರದಲ್ಲಿ -10, ಬೆಂಗಳೂರು ನಗರದಲ್ಲಿ -03, ಚಿಕ್ಕಬಳ್ಳಾಪುರ- 04, ಚಿತ್ರದುರ್ಗ-0, ದಾವಣಗೆರೆ-04, ಕೋಲಾರ-08, ರಾಮನಗರ-04, ಶಿವಮೊಗ್ಗ-28, ತುಮಕೂರು-28, ಬಾಗಲಕೋಟೆ-3, ಬೆಳಗಾವಿ-31, ಧಾರವಾಡ-0, ಗದಗ-09, ಹಾವೇರಿ-07, ಉತ್ತರ ಕನ್ನಡ-09, ವಿಜಯಪುರ-1, ಚಿಕ್ಕಮಗಳೂರು-28, ಉಡುಪಿ-12, ದಕ್ಷಿಣ ಕನ್ನಡ-21, ಕೊಡಗು-09, ಮಂಡ್ಯ-04, ಹಾಸನ-16, ಮೈಸೂರು-07, ಚಾಮರಾಜನಗರ-04, ರಾಯಚೂರು-24, ಬೀದರ್‌-21, ಬಳ್ಳಾರಿ-05, ಯಾದಗಿರಿ-10, ಕಲಬುರಗಿ-37, ಕೊಪ್ಪಳ-9, ವಿಜಯನಗರ-35 ನೇರ ನೇಮಕಾತಿ ಹುದ್ದೆಗಳು ಸದ್ಯ ಖಾಲಿ ಇವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಪಿಡಿಒ ನೇಮಕಕ್ಕೆ ಸಿದ್ಧತೆ ನಡೆಸಿದೆ ಎಂದು ʻವಿಸ್ತಾರ ನ್ಯೂಸ್‌ʼ ಜೂನ್‌ 17 ರಂದೇ ವರದಿ ಮಾಡಿತ್ತು. ಪಿಡಿಒ ಹುದ್ದೆಗಳು ಖಾಲಿ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕರು ದೂರುತ್ತಿರುವುದರಿಂದ ಸರ್ಕಾರ ಆದಷ್ಟು ಬೇಗ ಈ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ.

ವಿಧಾನಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್‌ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯದಲ್ಲಿ 604 ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-I ಹುದ್ದೆ ಖಾಲಿ ಇದ್ದು, ಇದರಲ್ಲಿ 530 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಾಗಿವೆ. 719 ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-II ಹುದ್ದೆ ಖಾಲಿ ಇದ್ದು, ಇದರಲ್ಲಿ 412 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಾಗಿವೆ. 345 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 82 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಾಗಿವೆ ಎಂದು ತಿಳಿಸಿದ್ದಾರೆ. ಪಿಡಿಒ ಹುದ್ದೆಗಳ ಜತೆಗೆ ಈ ಹುದ್ದೆಗಳಿಗೂ ನೇಮಕ ನಡೆಯಲಿದೆ.

ಯಾರಿಗೆಲ್ಲಾ ಅವಕಾಶ?

ಅಂಗೀಕೃತಗೊಂಡ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಪಿಡಿಒ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-I) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಓದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ವೇತನ ಎಷ್ಟಿರುತ್ತದೆ?

ಗ್ರಾಮ ಪಂಚಾಯಾತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯ ವೇತನ ಶ್ರೇಣಿ: ರೂ. 37,900-70,850
ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-I) ಹುದ್ದೆಯ ವೇತನ ಶ್ರೇಣಿ: ರೂ. 27,650-52,650
ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್‌-II) ಹುದ್ದೆಯ ವೇತನ ಶ್ರೇಣಿ: ರೂ. 21,400-42,000
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಯ ವೇತನ ಶ್ರೇಣಿ: ರೂ. 21,400-42,000

ನೇಮಕ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಈ ಯಾವ ಹುದ್ದೆಗಳಿಗೂ ಸಂದರ್ಶನ ನಡೆಸಲಾಗುವುದಿಲ್ಲ.

ಈ ಹಿಂದೆ ಪಿಡಿಒ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ನಡೆಸಲಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತಿತ್ತು. ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತಿತ್ತು. ಇದರಲ್ಲಿ ಒಟ್ಟು ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತಿತ್ತು. ಮತ್ತೊಂದು ಪತ್ರಿಕೆ-2 ಸಹ ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ನಡೆಯುತ್ತಿತ್ತು.

ಇದನ್ನೂ ಓದಿ : KEA Recruitment 2023 : ನಿಗಮ ಮಂಡಳಿಗಳಲ್ಲಿನ 670 ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

2016 ರಲ್ಲಿ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿತ್ತು. ಆದರೆ ಈ ಬಾರಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಈ ನೇಮಕ ಪ್ರಕ್ರಿಯೆ ನಡೆಸುತ್ತಿರುವುದರಿಂದ ಆಯೋಗವು ಗ್ರೂಪ್‌ “ಸಿʼʼ ಹುದ್ದೆಗಳ ನೇಮಕಕ್ಕೆ ನಡೆಸುವ ರೀತಿಯಲ್ಲಿಯೇ ಈ ಹುದ್ದೆಗಳಿಗೂ ಪರೀಕ್ಷೆ ನಡೆಸಲಿದೆ. ಗ್ರೂಪ್‌ ಸಿ ಹುದ್ದೆಗಳಿಗೆ 200 ಅಂಕಗಳಿಗೆ ಬದಲಾಗಿ ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ.

ಈ ನೇಮಕ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ʻವಿಸ್ತಾರ ನ್ಯೂಸ್‌ʼ ಒದಗಿಸಲಿದ್ದು, ಆಸಕ್ತರು ಆಗಾಗ ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬಹುದು.

Exit mobile version