ಬೆಂಗಳೂರು: ನೇರ ನೇಮಕಾತಿ ಕೋಟಾದಲ್ಲಿ ಪ್ರಸ್ತುತ 385 ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳು ಖಾಲಿ ಇದ್ದು, ಈ ಪೈಕಿ 150 ಹುದ್ದೆಗಳಿಗೆ ನೇರ ನೇಮಕಾತಿ (PDO Recruitment 2023) ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (Rural Development and Panchayath Raj Department-RDPR) ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿರುವ ಅವರು, ಒಟ್ಟಾರೆ 6,021 ಪಿಡಿಒ ಹುದ್ದೆಗಳು ಮಂಜೂರಾಗಿದ್ದು, 5,361 ಹುದ್ದೆಗಳು ಭರ್ತಿಯಾಗಿವೆ. 660 ಹುದ್ದೆಗಳು ಖಾಲಿ ಒವೆ. ಇವುಗಳನ್ನು ಬಡ್ತಿ ಮತ್ತು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ನೇರ ನೇಮಕಾತಿ ಮೂಲಕ 385 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದ್ದು, ಇವುಗಳಲ್ಲಿ ಈಗ 150 ಹುದ್ದೆಗಳ ನೇಮಕ ಪ್ರಕ್ರಿಯೆ ಮಾತ್ರ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ನೇರ ನೇಮಕಾತಿಯ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನೂ ಸಚಿವರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ -10, ಬೆಂಗಳೂರು ನಗರದಲ್ಲಿ -03, ಚಿಕ್ಕಬಳ್ಳಾಪುರ- 04, ಚಿತ್ರದುರ್ಗ-0, ದಾವಣಗೆರೆ-04, ಕೋಲಾರ-08, ರಾಮನಗರ-04, ಶಿವಮೊಗ್ಗ-28, ತುಮಕೂರು-28, ಬಾಗಲಕೋಟೆ-3, ಬೆಳಗಾವಿ-31, ಧಾರವಾಡ-0, ಗದಗ-09, ಹಾವೇರಿ-07, ಉತ್ತರ ಕನ್ನಡ-09, ವಿಜಯಪುರ-1, ಚಿಕ್ಕಮಗಳೂರು-28, ಉಡುಪಿ-12, ದಕ್ಷಿಣ ಕನ್ನಡ-21, ಕೊಡಗು-09, ಮಂಡ್ಯ-04, ಹಾಸನ-16, ಮೈಸೂರು-07, ಚಾಮರಾಜನಗರ-04, ರಾಯಚೂರು-24, ಬೀದರ್-21, ಬಳ್ಳಾರಿ-05, ಯಾದಗಿರಿ-10, ಕಲಬುರಗಿ-37, ಕೊಪ್ಪಳ-9, ವಿಜಯನಗರ-35 ನೇರ ನೇಮಕಾತಿ ಹುದ್ದೆಗಳು ಸದ್ಯ ಖಾಲಿ ಇವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಿಡಿಒ ನೇಮಕಕ್ಕೆ ಸಿದ್ಧತೆ ನಡೆಸಿದೆ ಎಂದು ʻವಿಸ್ತಾರ ನ್ಯೂಸ್ʼ ಜೂನ್ 17 ರಂದೇ ವರದಿ ಮಾಡಿದ್ದು, ಇದು ಈಗ ನಿಜವಾಗುತ್ತಿದೆ. ಪಿಡಿಒ ಹುದ್ದೆಗಳು ಖಾಲಿ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕರು ದೂರುತ್ತಿರುವುದರಿಂದ ಸರ್ಕಾರ ಆದಷ್ಟು ಬೇಗ ಈ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ. ಈ ಬಾರಿ ಕೆಇಎಗೆ ಬದಲಾಗಿ ಕೆಪಿಎಸ್‌ಸಿ ಮೂಲಕ ಈ ನೇಮಕಾತಿ ನಡೆಯಬಹುದು ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ 604 ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-I ಹುದ್ದೆ ಖಾಲಿ ಇದ್ದು, ಇದರಲ್ಲಿ 530 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಾಗಿವೆ. 719 ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-II ಹುದ್ದೆ ಖಾಲಿ ಇದ್ದು, ಇದರಲ್ಲಿ 412 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಾಗಿವೆ. 345 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 82 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಾಗಿವೆ ಎಂದು ತಿಳಿಸಿದ್ದಾರೆ. ಪಿಡಿಒ ಹುದ್ದೆಗಳ ಜತೆಗೆ ಈ ಹುದ್ದೆಗಳಿಗೂ ನೇಮಕ ನಡೆಯಲಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-I) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ಮುಂದಾಗಿದ್ದು, ಸದ್ಯವೇ ನೇಮಕಾತಿ ಅಧಿಸೂಚನೆ ಹೊರ ಬೀಳಲಿದೆ.
8,770 ಹುದ್ದೆ ಖಾಲಿ ಇವೆ!
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು 8,770 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಗ್ರೂಪ್-ಎಯ 212, ಗ್ರೂಪ್-ಬಿಯ1,058, ಗ್ರೂಪ್-ಸಿಯ 6,790 ಮತ್ತು ಗ್ರೂಪ್-ಡಿಯ 710 ಹುದ್ದೆಗಳಾಗಿವೆ. ವಿಧಾನಸಭೆಯಲ್ಲಿ ಹಿರೇಕೆರೂರು ಶಾಸಕ ಯು ಬಿ ಬಣಕಾರ್ ಕೇಳಿದ ಪ್ರಶ್ನೆಯೊಂದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದ್ದಾರೆ. ಇಲಾಖೆಯಲ್ಲಿ ಗ್ರೂಪ್-ಬಿ ಯ 651 ಸಹಾಯಕ ಎಂಜಿನಿಯರ್ ಹುದ್ದೆ ಇನ್ನೂ ಖಾಲಿ ಇವೆ. ಒಟ್ಟು ಗ್ರೂಪ್-ಬಿಯ 1,058 ಹುದ್ದೆಗಳಿದ್ದು, ಇದರಲ್ಲಿ 329 ಸಹಾಯಕ ನಿರ್ದೇಶಕರ ಹುದ್ದೆಗಳಾಗಿವೆ. ಗ್ರೂಪ್ -ಸಿ ಯ ಕಿರಿಯ ಎಂಜಿನಿಯರ್ 427, ಶೀಘ್ರಲಿಪಿಗಾರರ 513, ಎಫ್‌ಡಿಎ 647, ಎಸ್‌ಡಿಯ 1,158 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ತಿಳಿಸಿದ್ದಾರೆ.
ಯಾರಿಗೆಲ್ಲಾ ಅವಕಾಶ?
ಅಂಗೀಕೃತಗೊಂಡ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಪಿಡಿಒ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-I) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-II) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಓದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ವೇತನ ಎಷ್ಟಿರುತ್ತದೆ?
ಗ್ರಾಮ ಪಂಚಾಯಾತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯ ವೇತನ ಶ್ರೇಣಿ: ರೂ. 37,900-70,850
ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-I) ಹುದ್ದೆಯ ವೇತನ ಶ್ರೇಣಿ: ರೂ. 27,650-52,650
ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-II) ಹುದ್ದೆಯ ವೇತನ ಶ್ರೇಣಿ: ರೂ. 21,400-42,000
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಯ ವೇತನ ಶ್ರೇಣಿ: ರೂ. 21,400-42,000
ನೇಮಕ ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಈ ಯಾವ ಹುದ್ದೆಗಳಿಗೂ ಸಂದರ್ಶನ ನಡೆಸಲಾಗುವುದಿಲ್ಲ.
ಈ ಹಿಂದೆ ಪಿಡಿಒ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ನಡೆಸಲಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತಿತ್ತು. ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತಿತ್ತು. ಇದರಲ್ಲಿ ಒಟ್ಟು ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತಿತ್ತು. ಮತ್ತೊಂದು ಪತ್ರಿಕೆ-2 ಸಹ ನೂರು ಪ್ರಶ್ನೆಗಳಿರಲಿದ್ದು, 200 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಇದರಲ್ಲಿ ಈ ಬಾರಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ : IBPS Clerk Recruitment 2023 : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ4,045 ಕ್ಲರ್ಕ್ ಹುದ್ದೆ; ಪದವೀದರರಿಂದ ಅರ್ಜಿ ಆಹ್ವಾನ
2016 ರಲ್ಲಿ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿತ್ತು. ಆದರೆ ಈ ಬಾರಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಈ ನೇಮಕ ಪ್ರಕ್ರಿಯೆಯನ್ನು ವಹಿಸುವ ಸಾಧ್ಯತೆಗಳಿವೆ. ಹೀಗೆ ಮಾಡಿದಲ್ಲಿ ಆಯೋಗವು ಗ್ರೂಪ್ “ಸಿʼʼ ಹುದ್ದೆಗಳ ನೇಮಕಕ್ಕೆ ನಡೆಸುವ ರೀತಿಯಲ್ಲಿಯೇ ಈ ಹುದ್ದೆಗಳಿಗೂ ಪರೀಕ್ಷೆ ನಡೆಸಲಿದೆ. ಗ್ರೂಪ್ ಸಿ ಹುದ್ದೆಗಳಿಗೆ 200 ಅಂಕಗಳಿಗೆ ಬದಲಾಗಿ ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ.
ಈ ನೇಮಕ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ʻವಿಸ್ತಾರ ನ್ಯೂಸ್ʼ ಒದಗಿಸಲಿದ್ದು, ಆಸಕ್ತರು ಆಗಾಗ ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬಹುದು.