ಬೆಂಗಳೂರು: ನವೆಂಬರ್ ಐದಕ್ಕೆ ನಿಗದಿಯಾಗಿದ್ದ ಸಿವಿಲ್ ಕಾನ್‌ಸ್ಟೇಬಲ್ (Police Constable) ನೇಮಕಾತಿ ಲಿಖಿತ ಪರೀಕ್ಷೆಯನ್ನು (Written Exam) ಮುಂದೂಡಲಾಗಿದೆ (Exam Postponed). ನವೆಂಬರ್ 5ರಂದು ಒಂದೇ ದಿನ ಮೂರು ಬೇರೆ ಬೇರೆ ನೇಮಕಾತಿ ಪರೀಕ್ಷೆಗಳು (Job News) ನಿಗದಿಯಾಗಿದ್ದವು. ಕೆಲವು ಅಭ್ಯರ್ಥಿಗಳು ಮೂರೂ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ದಿನಾಂಕ ಬದಲಾವಣೆಗೆ ಒತ್ತಡ ಕೇಳಿಬಂದಿತ್ತು. ಇದಕ್ಕೆ ಪೊಲೀಸ್ ಇಲಾಖೆ ಸ್ಪಂದಿಸಿದೆ.
ಕೆಪಿಎಸ್‌ಸಿ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಸಹಾಯಕರ 242 ಹುದ್ದೆ, ಸಹಕಾರ ಸಂಘಗಳ ನಿರೀಕ್ಷಕರ 47 ಹುದ್ದೆ ಹಾಗೂ ರಾಜ್ಯ ಪೊಲೀಸ್ ಇಲಾಖೆಯ 454 ಸಿವಿಲ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ, ನವೆಂಬರ್ 5 ರಂದು ನಿಗದಿಯಾಗಿದೆ. ಇದರಿಂದ ಎರಡು ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವರಿಗೆ ಅನುಕೂಲವಾಗಲು ಪರೀಕ್ಷೆ ದಿನಾಂಕವನ್ನು ಬದಲಿಸಬೇಕು ಎಂದು ಕೋರಲಾಗಿತ್ತು. ರಾಜ್ಯದ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಈ ಬಗ್ಗೆ ಪತ್ರ ಬರೆದು ದಿನಾಂಕ ಬದಲಾವಣೆಗೆ ವಿನಂತಿ ಮಾಡಿದ್ದರು.
ಕಳೆದ 5 ವರ್ಷದಿಂದ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗಿಲ್ಲ. ಆದ್ದರಿಂದ ಸಾವಿರಾರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಹಾಗೂ ವಯೋಮಿತಿಗೆ ತಕ್ಕಂತೆ ಸರಿಯಾಗಿ ಉದ್ಯೋಗ ಸಿಗದೇ ಈಗಾಗಲೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈಗ ಒಂದೇ ದಿನ ಮೂರು ಪರೀಕ್ಷೆ ಇರುವುದರಿಂದ ಸರ್ಕಾರಿ ನೌಕರರಾಗಲು ವರ್ಷಗಟ್ಟಲೇ ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ಪರೀಕ್ಷೆ ವೇಳಾಪಟ್ಟಿ ಬದಲಿಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಅದನ್ನು ಪರಿಗಣಿಸಿ ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದರು.
ಇದನ್ನೂ ಓದಿ: JOB NEWS : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸದ್ಯವೇ 12 ಸಾವಿರ ಹೊಸ ಜಾಬ್ ಸೃಷ್ಟಿ
ನವೆಂಬರ್ 19ಕ್ಕೆ ಮುಂದೂಡಿಕೆ
2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) 454 ಹುದ್ದೆಗಳ ನೇಮಕಾತಿಗೆ ನವೆಂಬರ್ 5ರಂದು ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದ್ದು ನ.19ಕ್ಕೆ ನಡೆಸಲು ಸಿದ್ಧತೆ ನಡೆಸುವಂತೆ ಪೊಲೀಸ್ ನೇಮಕಾತಿ ವಿಭಾಗ ಡಿಐಜಿಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೂಚಿಸಿದ್ದಾರೆ.
ಈಗಾಗಲೇ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳು ಮತ್ತು ಇನ್ನಿತರ ಹೊಸ ಕೇಂದ್ರಗಳಲ್ಲಿ (ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ) ನ.19ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅನುಕೂಲ ಆಗುವಂತೆ ಪುನಃ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಲಿಖಿತ ಒಪ್ಪಿಗೆ ಪತ್ರವನ್ನು ಪಡೆದು ಪ್ರಧಾನ ಕಚೇರಿಗೆ ಕಳುಹಿಸಿಕೊಡುವಂತೆ ಡಿಐಜಿಪಿ ಆದೇಶಿಸಿದ್ದಾರೆ.