Site icon Vistara News

Civil Judge Exam: ಸ್ವಂತ ಊರಲ್ಲೇ 8.5 ತಿಂಗಳ ಗರ್ಭಿಣಿಗೆ ಜಡ್ಜ್‌ ಪರೀಕ್ಷೆ ಬರೆಯಲು ಅವಕಾಶ

Pepper spray

ಬೆಂಗಳೂರು: ಗರ್ಭಿಣಿಯೊಬ್ಬರಿಗೆ ತಾವಿರುವ ಊರಲ್ಲೇ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆ‌ (Civil Judge Exam) ಬರೆಯಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿ ಅಭ್ಯರ್ಥಿಯೊಬ್ಬರಿಗೆ ಹೈಕೋರ್ಟ್‌ ಈ ರೀತಿಯ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ ವಕೀಲೆ ನೇತ್ರಾವತಿ 8.5 ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬರಲು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು ಎಂದು ಸಿವಿಲ್‌ ನ್ಯಾಯಾಧೀಶರ ನೇರ ನೇಮಕಾತಿ ಸಮಿತಿಗೆ ಮನವಿ ಮಾಡಿದ್ದರು.

ತುಂಬು ಗರ್ಣಿಣಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಮಿತಿ, ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲೇ ನ.18 ಮತ್ತು 19ರಂದು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯದ ವ್ಯವಸ್ಥೆ ಮಾಡಿದೆ.

ಸಿವಿಲ್‌ ನ್ಯಾಯಾಧೀಶರ 57 ಹುದ್ದೆಗಳ ಭರ್ತಿಗೆ ಹೈಕೋರ್ಟ್‌ನಿಂದ ಮಾರ್ಚ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಅದರಂತೆ ಜುಲೈ 23ರಂದು ಪೂರ್ವಭಾವಿ ಪರೀಕ್ಷೆ ನಡೆದಿತ್ತು. 6000 ಅಭ್ಯರ್ಥಿಗಳ ಪೈಕಿ 10,22 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಇದರಲ್ಲಿ ನೇತ್ರಾವತಿ ಕೂಡ ಅರ್ಹತೆ ಪಡೆದಿದ್ದರು. ಇದೀಗ ನವೆಂಬರ್‌ 18 ಮತ್ತು 19ರಂದು ಮುಖ್ಯ ಪರೀಕ್ಷೆ ನಡೆಯುತ್ತಿದೆ.

ತಾನು ಗರ್ಭಿಣಿಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಕಷ್ಟವಾಗುತ್ತದೆ. ಹೀಗಾಗಿ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು ಎಂದು ಸಿವಿಲ್‌ ನ್ಯಾಯಾಧೀಶರ ನೇರ ನೇಮಕಾತಿ ಸಮಿತಿಗೆ ನೇತ್ರಾವತಿ ಮನವಿ ಮಾಡಿದ್ದರು.

ಇದನ್ನೂ ಓದಿ | Job Alert: ಸೆಂಟ್ರಲ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ನಾಳೆಯೇ ಕಡೆಯ ದಿನ

ಈ ಬಗ್ಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ಗಮನಕ್ಕೆ ಸಮಿತಿ ತಂದಿತ್ತು. ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದ್ದರು. ಹೀಗಾಗಿ ಏಕೈಕ‌ ಗರ್ಭಿಣಿ ಅಭ್ಯರ್ಥಿಗೆ ಮುಖ್ಯ ಪರೀಕ್ಷೆ ಬರೆಯಲು ಮಂಗಳೂರಿನಲ್ಲಿ ಅಗತ್ಯ ವ್ಯವಸ್ಥೆ ಮಾಡಲು ಮಹಿಳಾ ನ್ಯಾಯಾಂಗ ಅಧಿಕಾರಿಯನ್ನು ಹೈಕೋರ್ಟ್‌ ನೇಮಿಸಿತ್ತು.

ಕೆಎಸ್‌ಒಯುನಿಂದ ಕೆಎಎಸ್‌, ಐಎಎಸ್‌ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ (KSOU Mysuru) ವತಿಯಿಂದ ಕೆಎಎಸ್‌ ಮತ್ತು ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನವೆಂಬರ್‌ 24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕೆಎಸ್‌ಒಯು ಕುಲ ಸಚಿವ ಪ್ರೊ. ಕೆ.ಎಲ್‌.ಎನ್‌ ಮೂರ್ತಿ ತಿಳಿಸಿದ್ದಾರೆ.

50 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ತರಬೇತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0821- 2515944 ಅನ್ನು ಸಂಪರ್ಕಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version