ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಮಹತ್ತ್ವಾಕಾಂಕ್ಷೆಯ ಯೋಜನೆಯಾದ ರೋಜ್ಗಾರ್ (Rozgar Mela) ಮೇಳದ ಪ್ರಯುಕ್ತ ಮಂಗಳವಾರ (ನವೆಂಬರ್ 22) ೭೧,೦೦೦ ಮಂದಿಗೆ ನೇಮಕಾತಿ ಪತ್ರ ವಿತರಣೆಗೆ ಚಾಲನೆ ನೀಡಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಬದ್ಧತೆಯ ಭಾಗವಾಗಿ ರೋಜ್ಗಾರ್ ಮೇಳ ಆಯೋಜಿಸಲಾಗಿದೆ. ಯುವಜನತೆಗೆ ರಾಷ್ಟ್ರ ನಿರ್ಮಾಣದಲ್ಲಿ ಸೇವೆ ನೀಡುವ ಉತ್ತಮ ಅವಕಾಶ ಸಿಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಈ ಯೋಜನೆಯ ಅಡಿಯಲ್ಲಿ 71 ಸಾವಿರ ಶಿಕ್ಷಕರು, ಉಪನ್ಯಾಸಕರು, ನರ್ಸಿಂಗ್ ಆಫೀಸರ್ಸ್, ನರ್ಸ್, ವೈದ್ಯರು, ರೇಡಿಯೊಗ್ರಾಫರ್ಸ್, ಫಾರ್ಮಸಿಸ್ಟ್, ಪ್ಯಾರಾಮೆಡಿಕಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೂ ನೇಮಕ ನಡೆಯಲಿದೆ.
ಪ್ರಧಾನಿ ಮೋದಿ ಅವರು ಕರ್ಮಯೋಗಿ ಪ್ರಾರಂಭ್ ಮಾಡೆಲ್ ಅನ್ನೂ ಬಿಡುಗಡೆಗೊಳಿಸಲಿದ್ದಾರೆ. ಇದರ ಅಡಿಯಲ್ಲಿ ಆನ್‌ಲೈನ್ ಮೂಲಕ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾದವರಿಗೆ ವೃತ್ತಿಪರ ತರಬೇತಿ ನೀಡಲಾಗುವುದು.