ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ (ಗ್ರೇಡ್-1) ಹುದ್ದೆಗಳ ನೇರ ನೇಮಕ (Principal Recruitment) ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯವ್ಯಾಪಿ ಮಿಕ್ಕುಳಿದ ವೃಂದದ 265 ಮತ್ತು ಕಲ್ಯಾಣ ಕರ್ನಾಟಕದ 45 ಸೇರಿದಂತೆ ಒಟ್ಟು 310 ಹುದ್ದೆಗಳಿಗೆ ನೇಮಕ ನಡೆಯಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ನಾಳೆಯಿಂದ ಅಂದರೆ ಡಿಸೆಂಬರ್ 16 ರಿಂದ ಜನವರಿ15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಕಾನೂನು ರೀತ್ಯಾ ಸ್ಥಾಪಿಸಿರುವ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಮತ್ತು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸಂಯೋಜನೆಗೊಂಡಿರುವ ಯಾವುದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಥವಾ ಖಾಸಗಿ ಪದವಿ ಕಾಲೇಜಿನಲ್ಲಿ ಬೋಧನೆ ಅಥವಾ ಸಂಶೋಧನೆ ಅಥವಾ ಆಡಳಿತದಲ್ಲಿ ಪೂರ್ಣಕಾಲಿಕ ಬೋಧಕ ಸಿಬ್ಬಂದಿಯಾಗಿ ಒಟ್ಟು ಹದಿನೈದು. ವರ್ಷಗಳ ಸೇವಾನುಭವ ಹೊಂದಿರುವ ಪ್ರಾಧ್ಯಾಪಕ/ಸಹ ಪ್ರಾಧ್ಯಾಪಕರಾಗಿರಬೇಕು. ಪ್ರೌಢ ಸಂಶೋಧನಾ ಪತ್ರಿಕೆಗಳು (ಪ್ರಿ ರಿವ್ಯೂಡ್) ಅಥವಾ ಯು.ಜಿ.ಸಿ ಪಟ್ಟಿಮಾಡಿರುವ ಪತ್ರಿಕೆಗಳಲ್ಲಿ ಕನಿಷ್ಠ 10 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರಬೇಕು.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 16-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-01-2023
ಇ-ಪೋಸ್ಟ್ ಆಫೀಸ್‌ನಲ್ಲಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 17-01-2023
ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ: https://cetonline.karnataka.gov.in/kea
ವಯೋಮಿತಿ ಎಷ್ಟು?
ಅಭ್ಯರ್ಥಿಯ ವಯಸ್ಸು ಅರ್ಜಿಗಳನ್ನು ಸಲ್ಲಿಸುವುದಕ್ಕಾಗಿ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದಂದು 55 ವರ್ಷಗಳ ವಯಸ್ಸನ್ನು ಮೀರಿರಬಾರದು.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಮತ್ತು ಪ್ರವರ್ಗ 2ಎ, 2ಜಿ, 3ಎ, 3ಜಿ ಅಭ್ಯರ್ಥಿಗಳಿಗೆ ರೂ. 5000 ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶೂಲ್ಕ ವಿನಾಯಿತಿ ಇದ್ದು, ಇವರು 2500 ರೂ. ಪ್ರಕ್ರಿಯೆ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಿರುತ್ತದೆ. ಶುಲ್ಕವನ್ನು ಇ-ಅಂಚೆ ಕಚೇರಿಗಳಲ್ಲಿ ಮಾತ್ರ ಪಾವತಿಸಲು ಅವಕಾಶ ನೀಡಲಾಗಿದೆ.
ನೇಮಕ ಹೇಗೆ?
ಅರ್ಹ ಅಭ್ಯರ್ಥಿಗಳಿಗೆ ಮೊದಲಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ನೂರು ಅಂಕಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡು ಗಂಟೆ ಪರೀಕ್ಷೆ ಬರೆಯಲು ಸಮಯಾವಕಾಶ ನೀಡಲಾಗುತ್ತದೆ. ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಇದರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: http://kea.kar.nic.in
ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ