ಬೆಂಗಳೂರು: ಶಿಕ್ಷಕ ವೃತ್ತಿ ಸ್ಪರ್ಧಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಶುಕ್ರವಾರ (ನವೆಂಬರ್ 18)ವೇ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
“ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಸಂಬಂಧಿಸಿದ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿಯನ್ನು ನವೆಂಬರ್ 18ರಂದು ಸಂಜೆ 6 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು” ಎಂದು ಬಿ.ಸಿ.ನಾಗೇಶ್ ಅವರು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಅರ್ಜಿ ಸ್ವೀಕರಿಸಿತ್ತು. ಮೇ 21 ಹಾಗೂ 22 ರಂದು ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಈಗಾಗಲೇ 1:5ರಂತೆ ದಾಖಲಾತಿ ಪರಿಶೀಲನೆ ಕೂಡ ನಡೆದಿದೆ.
ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಅಕ್ರಮ | ಕೋಲಾರ ಜಿಲ್ಲೆಯಲ್ಲಿ 25, ಚಿತ್ರದುರ್ಗದಲ್ಲಿ ಐವರು ವಶಕ್ಕೆ; ಸಿಐಡಿ ತನಿಖೆ ಚುರುಕು