ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 13 ಸಾವಿರ ನೌಕರರ ನೇಮಕಾತಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ 100 ಸಾರಿಗೆ ಬಸ್ ಹಾಗೂ 40 ಹೊಸ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್‌ಗಳಿಗೆ (Non AC Sleeper Bus) ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.
ವಿಧಾನ ಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 100 ಸಾರಿಗೆ ಬಸ್, 40 ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಬಳಿಕ ಸಿದ್ದರಾಮಯ್ಯ ಅವರು ಮೈಸೂರಿನ ಕಾರ್ಯಕ್ರಮಕ್ಕೆ ತೆರಳಿದರೆ ಡಿಸಿಎಂ ಮತ್ತು ಸಾರಿಗೆ ಸಚಿವರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ನಾಲ್ಕು ವರ್ಷಗಳಿಂದ ಬಸ್ ಖರೀದಿ ಮಾಡಿರಲಿಲ್ಲ
ಈಗ ಸಾರಿಗೆ ಇಲಾಖೆಯಲ್ಲಿ 24 ಸಾವಿರ ಬಸ್ ಗಳಿವೆ. ಪ್ರತಿವರ್ಷ 10 ಸಾವಿರ ಬಸ್ ಸ್ಕ್ರಾಪ್ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಬಸ್ ಖರೀದಿ ಮಾಡಿರಲಿಲ್ಲ. ಈಗ 40 ಹೊಸ ಐಷಾರಾಮಿ ಬಸ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಹೇಳಿದರು. 500 ಕೋಟಿ ಬಜೆಟ್‌ನಲ್ಲಿ ಬಸ್‌ಗಳ ಖರೀದಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.
400 ಕಿಲೋಮೀಟರ್ ದೂರ ಇರುವಲ್ಲಿಗೆ ಸ್ಲೀಪರ್ ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ನಾನ್ ಏಸಿ ಬಸ್ ಗಳಿಗೆ ಡಿಮ್ಯಾಂಡ್ ಇದೆ. ಲಾಂಗ್ ರೂಟ್ ಬಸ್ ಗಳಲ್ಲಿ ಸಂಚರಿಸುವಾಗ ಆರಾಮ ಇರಬೇಕು ಎಂದು ಜನರು ಬಯಸುತ್ತಿದ್ದಾರೆ. ಅವರ ಬೇಡಿಕೆಯಂತೆ ಪಲ್ಲಕ್ಕಿ ಬಸ್ ಉದ್ಘಾಟನೆ ಮಾಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ದೇಶದಲ್ಲೆ ಹೆಚ್ಚು ಹಾಗೂ ಅತ್ಯುತ್ತಮ ಬಸ್ ಇರುವುದು ನಮ್ಮ ರಾಜ್ಯದಲ್ಲಿ. ನಮ್ಮ ಸೇವೆಯೂ ಅತ್ಯುತ್ತಮವಾಗಿದೆ. ಕೆಎಸ್‌ಆರ್‌ಟಿಸಿ ನಿಗಮಕ್ಕೆ 300ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. ನಗರ ಸಾರಿಗೆಯಲ್ಲೂ ಬಿಎಂಟಿಸಿ ನಂಬರ್ ಇನ್ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು.
2016ರಲ್ಲಿ ಸಾರಿಗೆ ಇಲಾಖೆಯಲ್ಲಿ ಡ್ರೈವರ್, ಕಂಡಕ್ಟರ್‌ಗಳ ನೇಮಕಾತಿ ಮಾಡಲಾಗಿತ್ತು. ಈಗ ಮತ್ತೆ ನೇಮಕಾತಿ ಆರಂಭ ಮಾಡಲಾಗಿದೆ. 13 ಸಾವಿರ ನೌಕರರ ನೇಮಕಾತಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿ : Pallakki Utsav: ಕೆಎಸ್‌ಆರ್‌ಟಿಸಿಯಲ್ಲಿ ಇಂದಿನಿಂದ ಪಲ್ಲಕ್ಕಿ ಉತ್ಸವ ಶುರು, ಏನಿದೆ ಸ್ಪೆಶಲ್?
ಶಕ್ತಿ ಯೋಜನೆ ಸಕ್ಸಸ್‌ಗೆ ಸಿಬ್ಬಂದಿ ಕಾರಣ ಎಂದ ರಾಮಲಿಂಗಾ ರೆಡ್ಡಿ
ಕೋವಿಡ್ ಸಮಯದಲ್ಲಿ 2800 ಬಸ್ ಸಂಚಾರ ಕ್ಯಾನ್ಸಲ್ ಮಾಡಲಾಗಿತ್ತು. ಈಗ ಮತ್ತೆ ಆ ಶೆಡ್ಯೂಲ್ ಆರಂಭ ಆಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ʻʻಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಓಡಾಡುವ ಅವಕಾಶ ನೀಡುವ ಶಕ್ತಿ ಯೋಜನೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಸಾಕಷ್ಟು ಆರೋಪ ಮಾಡಿದ್ದರು. ಆದ್ರೆ ಈ ಆರೋಪಗಳೆಲ್ಲ ಸುಳ್ಳಾಗಿವೆ. 73 ಕೋಟಿ ಮಹಿಳೆಯರು ಇಲ್ಲಿಯವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯ ಸಕ್ಸಸ್‌ಗೆ ಸಾರಿಗೆ ಸಿಬ್ಬಂದಿಗಳು ಕಾರಣ. ಅವರು ಒತ್ತಡದಲ್ಲೂ ಕೆಲಸ ಮಾಡಿದ್ದಾರೆʼʼ ಎಂದು ಬೆನ್ನು ತಟ್ಟಿದರು.