ನವ ದೆಹಲಿ: ಕೇಂದ್ರ ಸರ್ಕಾರ ಮುಂದಿನ ಒಂದೂವರೆ ವರ್ಷದಲ್ಲಿ ಸುಮಾರು ೧೦ ಲಕ್ಷ ಮಂದಿಯನ್ನು ನಾನಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ. ಎಲ್ಲ ಸಚಿವಾಲಯಗಳು, ನಾನಾ ಇಲಾಖೆಗಳಲ್ಲಿ ೯.೭೯ ಲಕ್ಷ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲಾಗುವುದು ಎಂದು ಸಹಾಯಕ ಸಚಿವ ಜಿತೇಂದರ್ ಸಿಂಗ್ ಅವರು ರಾಜ್ಯಸಭೆಗೆ ಗುರುವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಜೂನ್‌ನಲ್ಲಿ ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಮಾನವ ಸಂಪನ್ಮೂಲ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ನಡೆಸಿದ್ದರು. ಹಾಗೂ ಮುಂದಿನ ೧.೫ ವರ್ಷಗಳಲ್ಲಿ ೧೦ ಲಕ್ಷ ಜನರನ್ನು ನೇಮಕಾತಿ ಮಾಡಿಕೊಳ್ಳಲು ಸಲಹೆ ನೀಡಿದ್ದರು.
ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಜಿತೇಂದರ್ ಸಿಂಗ್ ಅವರು, ೨೦೨೧ರ ಮಾರ್ಚ್ ವೇಳೆಗೆ ೯.೭೯ ಲಕ್ಷ ಹುದ್ದೆಗಳು ನಾನಾ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಾಗಿವೆ ಎಂದು ತಿಳಿಸಿದ್ದಾರೆ. ರೈಲ್ವೆಯಲ್ಲಿ ೨.೬೪ ಲಕ್ಷ, ರಕ್ಷಣಾ ಇಲಾಖೆಯಲ್ಲಿ ೧.೪೩ ಲಕ್ಷ, ಗೃಹ ಇಲಾಖೆಯಲ್ಲಿ ೯೦,೦೫೦ ಹುದ್ದೆಗಳು ಖಾಲಿ ಇವೆ.