Site icon Vistara News

Rozgar Mela | ಕೇಂದ್ರ ಸರ್ಕಾರಿ ಹುದ್ದೆ ಪಡೆಯುವುದು ಹೇಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ

Rozgar Mela

ಬೆಂಗಳೂರು: ಕೋವಿಡ್‌-೧೯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೇಮಕ ಪ್ರಕ್ರಿಯೆಗಳನ್ನು ಸರಿಯಾಗಿ ನಡೆಸಿರಲಿಲ್ಲ. ಹೀಗಾಗಿ ಈಗ ಹತ್ತು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ರೋಜ್‌ಗಾರ್ ಮೇಳವನ್ನು (Rozgar Mela) ನಡೆಸಲಾಗುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಸುಮಾರು 39 ಇಲಾಖೆ, ಸೇನೆ, ಅರೆಸೇನಾಪಡೆ, ನಿಗಮ, ಸಂಸ್ಥೆ, ನಿಯಮಿತ ಹಾಗೂ ಇನ್ನಿತರ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸದ್ಯವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಖಾಲಿ ಹುದ್ದೆಗಳನ್ನು ಈಗಾಗಲೇ ಪಟ್ಟಿ ಮಾಡಲಾಗುತ್ತಿದ್ದು, ಇವುಗಳಿಗೆ ಮುಂದಿನ ಒಂದು ವರ್ಷದಲ್ಲಿ ನೇಮಕ ಮಾಡಿಕೊಂಡು, ಪ್ರಧಾನಿ ಸಮ್ಮುಖದಲ್ಲಿಯೇ ಅವರಿಗೆಲ್ಲಾ ನೇಮಕಾತಿ ಪತ್ರ ವಿತರಿಸುವ ಯೋಜನೆ ಇದಾಗಿದೆ.

ಉದ್ಯೋಗ ಮೇಳಕ್ಕೆ ಪ್ರಧಾನಿ ಚಾಲನೆ ನೀಡುತ್ತಿದ್ದಂತೆಯೇ ನೇಮಕದ ಕುರಿತು ತಪ್ಪು ಮತ್ತು ಸುಳ್ಳು ಮಾಹಿತಿಗಳು ಹರಡಲು ಆರಂಭವಾಗಿದೆ. ಇದೊಂದು ಉದ್ಯೋಗ ಮೇಳ, ಯಾರು ಬೇಕಾದರೂ ಕೇಂದ್ರ ಸರ್ಕಾರಿ ನೌಕರಿ ಪಡೆಯಬಹುದು ಎಂಬಂತಹ ಮಾಹಿತಿಗಳನ್ನು ಹರಿಯಬಿಡಲಾಗುತ್ತಿದೆ.

ಆದರೆ ಕೇಂದ್ರ ಸರ್ಕಾರದ ಯಾವುದೇ ಹುದ್ದೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೇ ಇಲಾಖೆಯಲ್ಲಿನ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹೀಗೆ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ ನೇಮಕ ಮಾಡಿಕೊಳ್ಳುತ್ತವೆ. ಹಾಗೆ ನೇರವಾಗಿ ಕಾಯಂ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಬರುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಸ್ಪಷ್ಟವಾಗಿ ತಿಳಿಯಬೇಕಿದೆ.

ಗ್ರೂಪ್‌ ಎ, ಗ್ರೂಪ್‌ ಬಿ, ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿಯ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಎಲ್ಲ ವೃಂದದ ಹುದ್ದೆಗಳಿಗೂ ಸರ್ಕಾರದ ನಿಯಮದ ಪ್ರಕಾರವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಮೊದಲಿಗೆ ಅರ್ಜಿ ಆಹ್ವಾನಿಸಿ, ನಿಗದಿತ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ಇರುವ ಹುದ್ದೆಗಳಿಗೆ ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇನ್ನು ಕೆಲವು ಹುದ್ದೆಗಳಿಗೆ ಸಂದರ್ಶನವೂ ನಡೆಯಲಿದೆ. ಯಾವುದೇ ಹುದ್ದೆಗಳಿಗೆ ನೇರವಾಗಿ ಅಂದರೆ ಪರೀಕ್ಷೆಗಳನ್ನು ನಡೆಸದೇ ನೇಮಕ ಮಾಡಿಕೊಳ್ಳುವ ಪರಿಪಾಠ ಇಲ್ಲ. ಈಗಲೂ ಇದೇ ನಿಯಮವನ್ನು ಅನುಸರಿಸಲಾಗುತ್ತದೆ.

ಮೋಸ ಮಾಡುವವರಿದ್ದಾರೆ, ಎಚ್ಚರವಿರಲಿ!
ಈ ನೇಮಕಾತಿ ಚುರುಕುಗೊಂಡ ಸಂದರ್ಭದಲ್ಲಿ ವಂಚಕರು ಕೂಡ ಚುರುಕಾಗುತ್ತಾರೆ. ಹೀಗಾಗಿ ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿದೆ ಎಂಬ ಮಾಹಿತಿ ಬಂದಾಗ ಅದು ಅಧಿಕೃತ ವೆಬ್‌ಸೈಟೇ ಎಂದು ಖಚಿತಪಡಿಸಿಕೊಂಡೇ ಮುಂದುವರಿಯಿರಿ. ಸರ್ಕಾರಿ ನೇಮಕಾತಿಗೆ (ಖಾಯಂ) ನೀತಿ, ನಿಯಮಗಳಿರುತ್ತವೆ. ಸರ್ಕಾರ ರೂಪಿಸಿದ ನೇಮಕಾತಿ ನಿಯಮದ ಪ್ರಕಾರವೇ ಪ್ರಕಟಣೆ ಹೊರಡಿಸಿ, ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಯಾರಾದರೂ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ಹಣ ಕೇಳಿದರೆ, ಮೋಸ ಹೋಗಬೇಡಿ. ಸರ್ಕಾರದ ಪ್ರತಿಯೊಂದು ನೇಮಕಾತಿಯ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮ್ಮ “ವಿಸ್ತಾರ ನ್ಯೂಸ್‌ʼʼ (http://vistaranews.com/attribute-category/job/)ನಲ್ಲಿ ವಿವರವಾದ ಮಾಹಿತಿ ಪ್ರಕಟಿಸಿರುತ್ತಾರೆ. ಇದನ್ನೆಲ್ಲಾ ಗಮನಿಸಿಯೇ ಅರ್ಜಿ ಸಲ್ಲಿಸಿ.

ಈಗಿನಿಂದಲೇ ಸಿದ್ಧತೆ ನಡೆಸಿ
ರೋಜ್‌ಗಾರ್ ಮೇಳವನ್ನು ಉದ್ಘಾಟಿಸುವ ಮೂಲಕ ಪ್ರಧಾನಿ ಮೋದಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಹೀಗಾಗಿ ಸದ್ಯವೇ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ. ಸಿಬ್ಬಂದಿ ನೇಮಕಾತಿ ಸಂಸ್ಥೆ (https://ssc.nic.in) ಅತಿ ಹೆಚ್ಚಿನ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಕೇಂದ್ರ ಸರ್ಕಾರದ ನೌಕರರಾಗಬೇಕೆಂಬ ಆಸೆ ಹೊತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇದಕ್ಕಾಗಿ ಅವರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಅಗತ್ಯವಾಗಿರುವ ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳಬೇಕು. ಅಂತೆಯೇ ಲಿಖಿತ ಪರೀಕ್ಷೆಗಳಿಗೆ ಅಭ್ಯಾಸ ಆರಂಭಿಸುವುದು ಕೂಡ ಅಗತ್ಯ.

ಈ ವೆಬ್‌ಸೈಟ್‌ಗಳನ್ನು ನೋಡುತ್ತಿರಿ
1. ಯುಪಿಎಸ್‌ಸಿ – https://www.upsc.gov.in
2. ಎಸ್‌ಎಸ್‌ಸಿ – https://ssc.nic.in
3. ಆರ್‌ಆರ್‌ಬಿ (ರೈಲ್ವೆ) – https://www.rrbbnc.gov.in
4. ಭಾರತೀಯ ಸೇನೆ – https://www.joinindianarmy.nic.in
5. ಎನ್‌ಸಿಎಸ್‌- https://www.ncs.gov.in

ಈ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ!
ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗುವವರು ಕೆಲವು ಸಾಮಾನ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳು ಯಾವವು ಎಂಬುದನ್ನು ನೋಡೊಣ;

  1. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ/ ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಅಥವಾ ಪ್ರಮಾಣ ಪತ್ರ /ಪಿಪಿಸಿ.
  2. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ /ಶಾಲೆಯ ವರ್ಗಾವಣೆ ಪ್ರಮಾಣ ಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದೃತ ಭಾಗ.
  3. ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ ಮತ್ತು ಪಿಂಚಣಿ /ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣ ಪತ್ರ ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಖಾಯಂ ಆಗಿ ಗಾಯಗೊಂಡಿರುವ ಪ್ರಮಾಣ ಪತ್ರ(ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ ಮಾತ್ರ)
  4. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು -3ಬಿ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ)
  5. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2ರಲ್ಲಿ ಗ್ರಾಮೀಣ ಮೀಸಲಾತಿ ಕೋರಿದ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು) (ಗ್ರಾಮೀಣ ಮೀಸಲಾತಿ ಕೋರಿದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1/ ಪ್ರವರ್ಗ-2ಎ/ ಪ್ರವರ್ಗ-2ಬಿ/ ಪ್ರವರ್ಗ-3ಎ/ಪ್ರವರ್ಗ-3ಬಿ ಅಭ್ಯರ್ಥಿಗಳು ನಮೂನೆ-2 ರಲ್ಲಿ ಮಾತ್ರ)
  6. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
  7. ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರು (ಮೀಸಲಾತಿ ಕೋರಿದ್ದಲ್ಲಿ)
  8. ಸೇವಾನುಭವ ಪ್ರಮಾಣ ಪತ್ರಗಳು (ನಿಗದಿಪಡಿಸಿದ್ದಲ್ಲಿ)
  9. ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳ ಮೀಸಲಾತಿಗೆ ಸಂಬಂಧಿಸಿದ ಅರ್ಹತಾ ಪ್ರಮಾಣ ಪತ್ರ(ಮೀಸಲಾತಿ ಕೋರಿದ್ದಲ್ಲಿ- ಪ್ರಮಾಣ ಪತ್ರಗಳನ್ನು ಮೂಲ ದಾಖಲಾತಿ ಪರಿಶೀಲನೆ ಸಮಯದಲ್ಲಿ ಸಲ್ಲಿಸಿದ್ದರೂ ಪರಿಗಣಿಸಲಾಗುವುದು.)
  10. ಸ್ವ ಗ್ರಾಮ ಪ್ರೃಮಾಣ ಪತ್ರ (ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರಿದ್ದಲ್ಲಿ)
  11. ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅವರ ನೇಮಕಾತಿ ಪ್ರಾಕಾರದ ಸಹಿ ಹಾಗೂ ಮೊಹರುನೊಂದಿಗೆ ಪಡೆಯಲಾದ ನಿರಾಕ್ಷೇಪಣ ಪ್ರಮಾಣ ಪತ್ರು. (ಕ್ರೂಢೀಕೃತ/ ಆನ್ -ಲೈನ್ ಮುಖಾಂತರ ಪಡೆದಿರುವ ನಿರಾಕ್ಷೇಪಣ ಪ್ರೃಮಾಣ ಪತ್ರಗಳು ಇದ್ದಲ್ಲಿ ಅಂತಹ ನಿರಾಕ್ಷೇಪಣ ಪತ್ರಗಳನ್ನು ನೇಮಕಾತಿ ಪ್ರಾಧಿಕಾರಿದಿಂದ ದೃಢೀಕರಿಸಿರಬೇಕು).

ಇದನ್ನೂ ಓದಿ | Job News | ಕೇಂದ್ರ ಸರ್ಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ

Exit mobile version