ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಕ್ಕೆ (SBI PO Recruitment 2022) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 12 ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬಹುದಾಗಿರುತ್ತದೆ.
ಈ ಬಾರಿ ಒಟ್ಟು 1,673 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಈ ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 270, ಎಸ್‌ಟಿ ಅಭ್ಯರ್ಥಿಗಳಿಗೆ 131, ಒಬಿಸಿ ಅಭ್ಯರ್ಥಿಗಳಿಗೆ 464 ಹಾಗೂ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 160 ಹುದ್ದೆಗಳನ್ನು ಮೀಸಲಿಡಲಾಗಿದೆ. ಉಳಿದ 648 ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ ದೊರೆಯಲಿವೆ.
ನೇಮಕಾತಿಯ ವೇಳಾಪಟ್ಟಿ ಇಂತಿದೆ;
ಅರ್ಹತೆಗಳೇನು?
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದ್ದು, ಅವರು 31-12-2022ರ ಒಳಗೆ ಪದವಿ ಪಡೆದಿರುವ ದಾಖಲೆಯನ್ನು ಸಂದರ್ಶನದ ಸಂದರ್ಭದಲ್ಲಿ ಹಾಜರು ಪಡಿಸಬೇಕಿರುತ್ತದೆ.
ವಯೋಮಿತಿ: 21 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯನ್ನು ದಿನಾಂಕ 01-04-2022 ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್ : https://ibpsonline.ibps.in/sbiposep22/
ಕನ್ನಡದಲ್ಲಿ ನಡೆಯಲ್ಲ ಪರೀಕ್ಷೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆ (ಮೇನ್)ಯನ್ನು ನಡೆಸಿ ನೇಮಕ ಮಾಡಿಕೊಳ್ಳುವಾಗ ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುತ್ತದೆ. ಆದರೆ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನಡೆಸಲಾಗುವ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆ (ಮೇನ್)ಯನ್ನು ಕನ್ನಡದಲ್ಲಿ ನಡೆಸಲಾಗುವುದಿಲ್ಲ. ಅಲ್ಲದೆ ರಾಜ್ಯದಲ್ಲಿನ ಹುದ್ದೆಗಳ ಸಂಖ್ಯೆಯನ್ನೂ ಪ್ರಕಟಿಸಿರುವುದಿಲ್ಲ.
ರಾಜ್ಯದ ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 750 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ.
ವೇತನ ಶ್ರೇಣಿ: ಬೇಸಿಕ್ ವೇತನ 41,960 ರೂ. ಗಳಾಗಿದ್ದು, ವೇತನ ಶ್ರೇಣಿ ಇಂತಿದೆ: ರೂ.36,000-14,90/7-46,430-1,740/2-49,910-1,990/7-63,840. ಇದಲ್ಲದೆ, ಡಿಎ/ಎಚ್‌ಆರ್‌ಎ, ಮೆಡಿಕಲ್ ಇನ್ನಿತರ ಭತ್ಯೆಗಳೂ ಇರುತ್ತವೆ.
ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: https://sbi.co.in/web/careers/current-openings
ನೇಮಕ ಹೇಗೆ?
ಮೂರು ಹಂತದ ನೇಮಕ ಪ್ರಕ್ರಿಯೆ ಮೂಲಕ ಈ ಹುದ್ದೆಗಳಿಗೆ ನೇಮಕ ನಡೆಯಲಿದೆ. ಮೊದಲಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ, ಇದರಲ್ಲಿ ಅರ್ಹತೆ ಪಡೆದವರಿಗೆ ಮೂಖ್ಯ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೂರನೇ ಹಂತದಲ್ಲಿ ನಡೆಯಲಿರುವ ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ | SBI Recruitment 2022 | ಎಸ್‌ಬಿಐನಿಂದ 5,008 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ನೇಮಕ